ದೆಹಲಿ: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ಮೂಲಕ ಕಂಬಳಕ್ಕಿದ್ದ ದೊಡ್ಡ ತೊಡಕೊಂದು ನಿವಾರಣೆಯಾದಂತಾಗಿದೆ.
ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎನ್ನುವ ವಿಚಾರದಲ್ಲಿ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮೇ 18ರಂದು ತನ್ನ ತೀರ್ಪು ನೀಡಿದ್ದು, ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು ಕೇಳಿಕೊಂಡಿದ್ದ ತಮಿಳುನಾಡು ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ ಕರ್ನಾಟಕದ ಕಂಬಳಕ್ಕೆ ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ಓಟಕ್ಕೂ ಹಸಿರು ನಿಶಾನೆ ತೋರಿಸಿದೆ.
ಪ್ರಾಣಿ ಹಕ್ಕುಗಳ ಸಂರಕ್ಷಣ ಸಂಸ್ಥೆ ಪೆಟಾ ಜಲ್ಲಿಕಟ್ಟು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು ತಮಿಳುನಾಡು ಸರ್ಕಾರದ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ, ಈ ಸ್ಪರ್ಧೆಗೆ ಒಪ್ಪಿಗೆ ನೀಡಿದೆ.