ಪುತ್ತೂರು: ಬಿಜೆಪಿ ನಾಯಕರ ಬ್ಯಾನರ್ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವುದು ಬಿಜೆಪಿ ನಾಯಕರೇ. ಬೇಕಿದ್ದರೆ ಕಾಲ್ ಲಿಸ್ಟ್ ತೆಗೆಯಿರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರ ಬ್ಯಾನರ್ ಹಾಕಿ, ಅದಕ್ಕೆ ಚಪ್ಪಲಿ ಹಾರ ಹಾಕಿರುವ ಪ್ರಕರಣ ಇದೀಗ ವಿವಿಧ ಮಗ್ಗುಲು ಬದಲಿಸಿಕೊಳ್ಳುತ್ತಿದೆ. ಇದರ ನಡುವೆ ಪುತ್ತೂರಿಗೆ ಆಗಮಿಸಿದ್ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಕ್ರಿಯೇ ನೀಡಿದ ಅಶೋಕ್ ಕುಮಾರ್ ರೈ ಅವರು, ಬಿಜೆಪಿ ಸರಕಾರ ಇದೀಗ ರಾಜಕೀಯವಾಗಿ ಶಕ್ತಿಹೀನವಾಗಿದೆ. ಅದಕ್ಕಾಗಿ ಕಾಂಗ್ರೆಸ್ ಮೇಲೆ ಆರೋಪಗಳನ್ನು ಮಾಡುತ್ತಿದೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಬುಧವಾರ ರಾತ್ರಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿ, ಹಲ್ಲೆ ನಡೆಸಿದ ಪೊಲೀಸರನ್ನು ರಜೆಯಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿಸಿದ್ದೇನೆ. ಇಂದು ಮಧ್ಯಾಹ್ನದೊಳಗೆ ತನಿಖೆ ನಡೆಸಿ ಕ್ರಮ ಜರುಗಿಸುವಂತೆಯೂ ತಿಳಿಸಿದ್ದೆ. ಅದರಂತೆ ಗುರುವಾರ ಮಧ್ಯಾಹ್ನದೊಳಗೆ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದು, ಡಿವೈಎಸ್ಪಿ ಅವರ ವಿರುದ್ಧ ಇಲಾಖಾ ಕ್ರಮಕ್ಕೆ ಬರೆಯಲಾಗಿದೆ ಎಂದು ವಿವರಿಸಿದರು.
ಬಿಜೆಪಿ ನಾಯಕರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ತಕ್ಷಣವೇ ಇದು ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಎಂದು ಬಿಜೆಪಿಗರು ದೂರಿದರು. ಬಳಿಕ ಬ್ಯಾಟ್ ಕಾರ್ಯಕರ್ತರ ಕೆಲಸ ಎಂದು ದೂರಿದರು. ನಂತರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮೇಲಿನಿಂದ ಮೇಲೆ ಒತ್ತಡ ಹಾಕಿ, ಆರೋಪಿಗಳನ್ನು ಬಂಧಿಸಿ ದೌರ್ಜನ್ಯ ಎಸಗಿದ್ದಾರೆ. ಇದೀಗ ಈ ಕೃತ್ಯವನ್ನು ಕಾಂಗ್ರೆಸ್ ಸರಕಾರದ ಮೇಲೆ ಹಾಕುವುದು ಸರಿಯಲ್ಲ. ಇದರ ಬಗ್ಗೆ ಅನುಮಾನಗಳಿದ್ದರೆ ಕಾಲ್ ಲಿಸ್ಟ್ ತೆಗೆದು ನೋಡಲಿ. ಸತ್ಯಾಂಶ ತಿಳಿದುಬರುತ್ತದೆ ಎಂದು ವಿವರಿಸಿದರು.