ಕಡಬ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮರ್ಧಾಳ ಸಮೀಪದ ನೆಕ್ಕಿತಡ್ಕ ಎಂಬಲ್ಲಿ ರಸ್ತೆಗೆ ಮೋರಿ ಅಳವಡಿಸಲು ಪ್ರಾರಂಭಿಸಿ ಎರಡು ತಿಂಗಳಾದರೂ ಕಾಮಗಾರಿ ಮುಗಿಯದೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಲೇ ಇದೆ.
ಈಗ ಮೋರಿ ಅಳವಡಿಸುತ್ತಿರುವ ಸ್ಥಳದಲ್ಲಿ ಈ ಹಿಂದೆ ಎರಡು ಫೀಟ್ ಸುತ್ತಳತೆಯ ಪೈಪ್ ಅಳವಡಿಸಿರುವುದರಿಂದ ಮಳೆಗಾಲದಲ್ಲಿ ಇಲ್ಲಿ ನೀರು ಸರಾಗವಾಗಿ ಹರಿಯದೆ ಮಳೆ ನೀರು ಶೇಕರಣೆಯಾಗಿ ಸಮಸ್ಯೆ ತಲೆದೋರುತ್ತಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿ ಸದೃಢ ಮೋರಿ ಅಳವಡಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ಇಲಾಖಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಇದೀಗ ಮಳೆಹಾನಿಯೋಜನೆಯಲ್ಲಿ ಹೆದ್ದಾರಿ ದುರಸ್ತಿ ಅನುದಾನದಲ್ಲಿ ಇಲಾಖೆ ಮುಖಾಂತರ ಮೋರಿ ಅಳವಡಿಸುವ ಕಾರ್ಯ ಎರಡು ತಿಂಗಳ ಹಿಂದೆ ಪ್ರಾರಂಭಿಸಲಾಗಿದೆ.
ರಸ್ತೆಯ ಒಂದು ಭಾಗದಿಂದ ಕಾಮಗಾರಿ ಪ್ರಾರಂಭಿಸಿ ಪೈಪ್ ಅಳವಡಿಸಿ ಮಣ್ಣು ಹಾಕದೆ ಒಂದು ಬದಿಯಲ್ಲಿ ಮಾತ್ರ ಬ್ಯಾರಿಕೇಡ್ ಹಾಕಲಾಗಿದೆ. ಒಂದೆಡೆ ಈ ಬ್ಯಾರಿಕೇಡ್, ಇನ್ನೊಂದೆಡೆ ಮೋರಿ ಅಳವಡಿಸಿ ಮಣ್ಣ ಹಾಕದೆ ಇರುವುದರಿಂದ ಅಪಘಾತಗಳು ನಿರಂತರ ನಡೆಯುತ್ತಲೇ ಇದೆ. ಕಳೆದ ಮಾರ್ಚ್ನಲ್ಲಿ ಕಾಮಗಾರಿ ಪ್ರಾರಂಭಿಸಿ ಬಿಟ್ಟು ಹೋದ ಗುತ್ತಿಗೆದಾರ ಮತ್ತೆ ಈ ಕಡೆ ಸುಳಿಯಲೇ ಇಲ್ಲ. ಮೂಲ್ಕಿ ಮೂಲದ ಇಮ್ರಾನ್ ಎನ್ನುವವರು ಗುತ್ತಿಗೆ ಪಡೆದಿದ್ದು. ಕಾಮಗಾರಿ ಪ್ರಾರಂಭಿಸಿ ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಪರಿಣಾಮ ಈಗ ಅಪಘಾತದ ಸರಮಾಲೆ ಇಲ್ಲಿ ಸಂಭವಿಸುತ್ತಿದೆ. ಮಂಗಳವಾರ ರಾತ್ರಿ ಕೂಡಾ ಉಪ್ಪಿನಂಗಡಿಯ ಹಿರೆಬಂಡಾಡಿ ನಿವಾಸಿಯೊಬ್ಬರು ತಮ್ಮ ಸಂಬಂಧಿಕರ ಮನೆ ಮರ್ಧಾಳಕ್ಕೆ ಆಗಮಿಸುತ್ತಿದ್ದಾಗ ಅವರು ಚಲಾಯಿಸುತ್ತಿದ್ದ ಬೈಕ್ ಅಪಘಾತಕ್ಕೆ ಒಳಗಾಗಿದೆ. ಇವರಿಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಮಗಾರಿ ಪ್ರಾರಂಭವಾದ ದಿನದಿಂದ ಈವರೆಗೆ ಒಟ್ಟ 13 ಅಪಘಾತಗಳು ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈಗೊಂಡು ಕಾಮಗಾರಿ ಮುಗಿಸಕೊಡಬೇಕು ಎಂದು ಅಗ್ರಹಿಸಿದ್ದಾರೆ.
2 ದಿನದಲ್ಲಿ ಕಾಮಗಾರಿ ಪೂರ್ಣ:
ಮಳೆಹಾನಿ ನಿರ್ವಹಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಗುತ್ತಿಗೆದಾರರ ಕೆಲಸದವರು ಕೈಕೊಟ್ಟು ಕಾಮಗಾರಿ ನಿಧಾನಗತಿಯಲ್ಲಿ ಸಾಗುವಂತಾಗಿದೆ. ಅಲ್ಲಿ ಅಪಘಾತಗಳು ಸಂಭವಿಸುತ್ತವೆ ಎನ್ನುವ ಕಾರಣಕ್ಕಾಗಿ ಇಲಾಖಾ ವತಿಯಿಂದಲೇ ಮೋರಿ ಅಳವಡಿಸಿದಲ್ಲಿಗೆ ಮಣ್ಣು ಹಾಕಲಾಗುತ್ತಿದೆ. ಈಗ ಪ್ರಾರಂಭಿಸಿರುವ ಕಾಮಗಾರಿಯನ್ನು ಇನ್ನೆರಡು ದಿನಗಳಲ್ಲಿ ಮುಗಿಸಿ ಇನ್ನೊಂದು ಭಾಗದ ಕಾಮಗಾರಿ ಪ್ರಾರಂಭಿಸಲಾಗುವುದು ಒಂದು ವಾರದಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗುವುದು. ಅಪಘಾತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.
ಕನಿಷ್ಕ ಎಸ್ ಚಂದ್ರ, ಸಹಾಯಕ ಅಭಿಯಂತರರು, ಲೋಕೊಪಯೋಗಿ ಇಲಾಖೆ ಪುತ್ತೂರು ವಿಭಾಗ