ರಾಮಕುಂಜ: ವಿಧಾನ ಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಬಿಜೆಪಿ ಅಭ್ಯರ್ಥಿ ವಿಜಯಶಾಲಿಯಾದ ಮೇಲೆ ಸುಳ್ಯ ವಿಧಾನ ಸಭಾ ಕ್ಷೇತ್ರದ ರಾಮಕುಂಜ ಬೂತ್ ನಂ.6 ರಲ್ಲಿನ ಮತ ಎಣಿಕೆಯೇ ನಡೆಸಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮಾದರಿ ಮತ ಡಿಲೀಟ್ ಮಾಡದೇ ಅಧಿಕಾರಿಗಳು ಮಾಡಿರುವ ಎಡವಟ್ಟಿನ ಪರಿಣಾಮ ಬೂತ್‌ನಲ್ಲಿ 713 ಮತ ಚಲಾವಣೆಯಾದರೂ ಇವಿಎಂನ ಮತ ಎಣಿಕೆಯಾಗದೆ ಬಾಕಿ ಉಳಿದಿರುವುದು ಮತದಾರರ ಅಸಮಾಧಾನಕ್ಕೆ ಎಡೆಯಾಗಿದೆ. ಅಧಿಕಾರಿಗಳ ಅಸಡ್ಡೆಯ ಪರಮಾವಧಿ ಇದಾಗಿದೆ ಎಂದು ಅಕ್ರೋಶ ವ್ಯಕ್ತವಾಗಿದೆ.
ಬೂತ್‌ನಲ್ಲಿ ಮತದಾನ ಆರಂಭಿಸುವ ಮೊದಲು ಅಭ್ಯರ್ಥಿಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಮಾದರಿ ಮತದಾನ ಮಾಡುವ ಕ್ರಮವಿದೆ. ಬಳಿಕ ಈ ಮತಗಳನ್ನು ಡಿಲೀಟ್ ಮಾಡಿ ಮತದಾನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆದರೆ ರಾಮಕುಂಜ ಗ್ರಾಮದ ಬೂತ್ ನಂ.6ರಲ್ಲಿ ಮಾದರಿ ಮತದಾನದ ಸಂದರ್ಭ 51 ಮತ ಚಲಾವಣೆ ಮಾಡಿ ಟೆಸ್ಟ್ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಅದನ್ನು ಡಿಲೀಟ್ ಮಾಡದೆ ಮತದಾನ ಮುಂದುವರಿಸಿದ್ದರು. ಈ ಬೂತ್‌ನಲ್ಲಿ ಒಟ್ಟು 713 ಮತ ಚಲಾವಣೆಯಾಗಿತ್ತು.
ಮೇ 13ರಂದು ಮತ ಎಣಿಕೆ ಸಂದರ್ಭ ಅಧಿಕಾರಿಗಳು ಮಾಡಿದ ಎಡವಟ್ಟು ಬೆಳಕಿಗೆ ಬಂದಿದೆ. ಹಾಗಾಗಿ ಈ ಇವಿಎಂನ ಮತ ಎಣಿಕೆ ಮಾಡದೆ ಹಾಗೆ ಇರಿಸಲಾಗಿದೆ. ಅಭ್ಯರ್ಥಿಯ ಗೆಲುವಿನ ಅಂತರ 713 ಮತಗಳ ಒಳಗಿದ್ದರೆ ಮಾತ್ರ ಈ ಮತಗಳನ್ನು ಎಣಿಕೆ ಮಾಡಲಾಗುವುದು. ಭಾಗೀರಥಿ ಮುರುಳ್ಯ ಅವರ ಗೆಲುವಿನ ಅಂತರ 30 ಸಾವಿರಕ್ಕೂ ಅಧಿಕ ಇರುವುದರಿಂದ ಈ ಇವಿಎಂನ ಮತ ಎಣಿಕೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಮತದಾರರ ಮತದಾನಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಮತದಾರರು ದೂರಿದ್ದಾರೆ. ಮತದಾನ ನಿಮ್ಮ ಹಕ್ಕು ಅದನ್ನು ಅಗತ್ಯವಾಗಿ ಚಲಾಯಿಸಬೇಕು ಎಂದು ಜಾಗೃತಿ ಮೂಡಿಸುವ ಅಧಿಕಾರಿಗಳಿಂದ ಇಂತಹ ಪ್ರಮಾದ ನಡೆದಿರುವುದು ಅಕ್ರೋಶಕ್ಕೆ ಕಾರಣವಾಗಿದೆ.