ಕಡಬ ಕಾಂಗ್ರೇಸ್‌ನಲ್ಲಿ ಗರಿಗೆದರಿದ ಅಧಿಕಾರದ ಕನಸುಗಳು | ಕಾರ್ಯಕರ್ತರಲ್ಲಿ ಹೊಸ ಹುರುಪು

ಕಡಬ: ರಾಜ್ಯದಲ್ಲಿ ಬಿಜೆಪಿ ಸೋತು  ಕಾಂಗ್ರೇಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಡಬ ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದ್ದು, ಹೊಸ ಹೊಸ ಕನಸುಗಳು ಚಿಗುರೊಡೆಯಲು ಪ್ರಾರಂಭವಾಗಿದೆ.

ತಾಲೂಕು ಕೇಂದ್ರವಾಗಿರುವ ಕಡಬಕ್ಕೆ ನಿಗಮ ಮಂಡಳಿ ಅಥವಾ ಎಂ.ಎಲ್‌ಸಿ ಸ್ಥಾನಗಳನ್ನು ನೀಡಿ ಪಕ್ಷ ಬಲವರ್ಧನೆಗೆ ಅವಕಾಶ ನೀಡಬೇಕು ಎನ್ನುವ ಹಕ್ಕೊತ್ತಾಯಗಳು ಕೇಳಿ ಬರುತ್ತಿವೆ. ಒಂದು ಕಾಲದಲ್ಲಿ ಕಡಬ ಕಾಂಗ್ರೇಸ್‌ನ ಭದ್ರಕೋಟೆಯಾಗಿತ್ತು. ಆದರೆ ಕಳೆದ 30 ವರ್ಷಗಳಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ  ಕಾಂಗ್ರೇಸ್‌ನ ಶಾಸಕರನ್ನು ಕಾಣಲು ಸಾಧ್ಯವಾಗದೆ ಕಡಬ ಕಾಂಗ್ರೇಸ್ ಕೂಡಾ ಬಡವಾಗಿತ್ತು. ಒಂದು ಗೆಲುವಿಗೆ ಕಾತದಿಂದ ಕಾಯುತ್ತಿದ್ದ ಕಾಂಗ್ರೇಸ್‌ಗೆ ಈ ಬಾರಿ ಕೂಡಾ ನಿರಾಸೆಯಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿ ಒಬ್ಬ ಸಾಮಾನ್ಯ ಮಹಿಳೆ ಶಾಸಕಿಯಾಗುವ ಅವಕಾಶ ಸಿಕ್ಕಿದ್ದು ಬಿಜೆಪಿ ಪಾಲಿಗೆ ಬೂಸ್ಟ್ ಆದರೂ ಕಾಂಗ್ರೇಸ್‌ಗೆ ಗೆಲವು ಎನ್ನುವುದು ಕಬ್ಬಿಣದ ಕಡಲೆ ಕಾಯಿಯಾಗಿಯೇ ಉಳಿದಿದೆ. ಆದರೂ ರಾಜ್ಯದಲ್ಲಿ ಕಾಂಗ್ರೇಸ್ ಅಭೂತಪೂರ್ವ ದಿಗ್ವಿಜಯ ಸಾಧಿಸಿರುವುದು ಕಡಬ ಕಾಂಗ್ರೇಸ್ ಪಾಲಿಗೆ ಇನ್ನಿಲ್ಲದ ಆತ್ಮ ವಿಶ್ವಾಸವನ್ನು ಹೆಚ್ಚಸಿದೆ. ಆದರೂ ಸರಕಾರ ಆಯಕಟ್ಟಿದ ಹುದ್ದೆಗಳು ಸಿಗುತ್ತಿಲ್ಲ ಎನ್ನುವ ಕೊರುಗು ಇನ್ನೂ ಮಾಸಿಲ್ಲ.

 ಈ  ಹಿಂದೆ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಒಂದು ಬಾರಿ ಕೂಡಾ ಉನ್ನತ ಮಟ್ಟದ ನಿಗಮ ಮಂಡಳಿಗಳ ಸ್ಥಾನಮಾನ  ಇಲ್ಲಿನ ನಾಯಕರುಗಳಿಗೆ ದೊರೆತಿಲ್ಲ . ಅಕ್ರಮ ಸಕ್ರಮ  ಸಮಿತಿ, ದೇವಸ್ಥಾನಗಳ ಅಧಿಕಾರ ಚುಕ್ಕಾಣಿ ಬಿಟ್ಟರೆ ರಾಜ್ಯ ಮಟ್ಟದ ನಿಗಮ ಮಂಡಳಿಗಳಲ್ಲಿ ಸದಸ್ಯ ಸ್ಥಾನ ಕೂಡಾ ಸಿಕ್ಕಿದ್ದು ವಿರಳಾತಿವಿರಳ. ಡಾ|ರಘು ಬೆಳ್ಳಿಪ್ಪಾಡಿ ಅವರು ಸತತ ಮೂರು ಬಾರಿ ಸುಳ್ಯ ಕ್ಷೇತ್ರದಲ್ಲಿ ವಿಧಾನ ಸಭೆಗೆ ಸ್ಪರ್ಧಿಸಿ ಸೋತಾಗ ಪಕ್ಷ ಅಧಿಕಾರಕ್ಕೆ ಬಂದರೆ ರಘು ಅವರಿಗೆ ಎಂಎಲ್‌ಸಿ ಸ್ಥಾನ ನೀಡುವ ಭರವಸೆಯನ್ನು ಕೆಲವು ಕಾಂಗ್ರೇಸ್ ನಾಯಕರು ಬಹಿರಂಗವಾಗಿಯೇ ನೀಡಿದ್ದರು. ಆದರೆ ಅವರಿಗೆ ಸಿಕ್ಕಿದ್ದು ರಾಜೀವಗಾಂಧಿ ವಿವಿಯ ಸೆನೆಟ್ ಸದಸ್ಯ ಸ್ಥಾನ ಮಾತ್ರ. ಎಂಎಲ್‌ಸಿ ಸ್ಥಾನ ಗಗನಕುಸುಮವಾಗಿಯೇ ಉಳಿಯಿತು.































 
 

ಹಾಗೆ ನೋಡಿದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಸ್‌ಎನ್,ಮನ್ಮಥ  ಅವರಿಗೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿತ್ತು. ಕಳೆದ ಬಾರಿ ಎ.ವಿ.ತೀರ್ಥಾರಾಮರಿಗೆ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿತ್ತು. ಕೆಲವರಿಗೆ ನಿಗಮಗಳಲ್ಲಿ ಸದಸ್ಯ ಸ್ಥಾನ ನೀಡಿತ್ತು. ಇದು ಕಡಬಕ್ಕೆ ಅಲ್ಲದಿದ್ದರೂ ಸುಳ್ಯ ಮಟ್ಟಿಗೆ ದೊಡ್ಡ ಸಂಗತಿ ಎನಿಸಿಕೊಂಡಿದೆ. 

ಇದೀಗ ಕಾಂಗ್ರೇಸ್ ಆಡಳಿತಕ್ಕೆ ಬರುತ್ತಿದ್ದಂತೆ ಕಡಬ ಕಾಂಗ್ರೇಸ್ ನಾಯಕರುಗಳು ಎದ್ದು ನಿಂತಿದ್ದಾರೆ. ಕಡಬ ತಾಲೂಕು ಘೋಷಣೆಯಾಗಿ ತಾಲೂಕು ಪಂಚಾಯಿತಿ ಕಟ್ಟಡ, ಮಿನಿ ವಿಧಾನ ಸೌಧ ಕಟ್ಟಡ ಹಾಗೂ ಇನ್ನಿತರ ಕಟ್ಟಡಗಳು ನಿರ್ಮಾಣಗೊಂಡು ಉದ್ಘಾಟನೆಯಾದರೂ ಇಲ್ಲಿಗೆ ಬೇಕಾದ ಇಲಾಖೆಗಳ ಕಾರ್ಯನಿರ್ವಹಣೆ ಇನ್ನೂ ಪ್ರಾರಂಭ ಆಗಿಲ್ಲ. ತಾಲೂಕು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದರೆ ಇಲ್ಲಿಗೆ ಸರಕಾರದ ನಿಗಮಗಳಲ್ಲಿ ಸೂಕ್ತ ಸ್ಥಾನ ಮಾನ ಸಿಗಬೇಕು ಎನ್ನುವುದು ಕಾಂಗ್ರೇಸ್ ನಾಯಕರ ಅಭಿಮತ. ಹಿಂದೆ ಕಾಂಗ್ರೇಸ್ ಆಡಳಿತದ ಅವಧಿಯಲ್ಲಿ ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರು ಮಾಡಬೇಕೆಂದು ಇಲ್ಲಿನ ಕಾಂಗ್ರೇಸ್ ನಾಯಕರು ಬೇಡಿಕೆ ಇಟ್ಟಾಗ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಸ್ತು ಎಂದಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿಯಿತು, ಬಳಿಕ ಬಂದ ಬಿಜೆಪಿ ಸರಕಾರ ಕೂಡಾ ಈ ಬಗ್ಗೆ ಅಸಡ್ಡೆ ತೋರಿತ್ತು. ಇದೀಗ ಮತ್ತೆ ಕಾಲೇಜು ಮಂಜೂರಾತಿಯ ಕನಸು ಗರಿಗೆದರಿದೆ. ತಾಲೂಕು ಘೋಷನೆ ಮಾಡಿದ್ದೂ ನಾವು ಸಂಪೂರ್ಣ  ಅನುಷ್ಠಾನ ಮಾಡುವುದೂ ನಾವೇ  ಎನ್ನುವ ಅತ್ಯುತ್ಸಾಹದಲ್ಲಿದ್ದಾರೆ ಇಲ್ಲಿನ ಕಾಂಗ್ರೇಸ್ ನಾಯಕರು.

ಕಂದಾಯ ಇಲಾಖೆ, ಪೋಲೀಸ್ ಠಾಣೆಗಳಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಲು ಸನ್ನದ್ಧರಾಗಿರುವ ಇಲ್ಲಿನ ಕಾಂಗ್ರೇಸ್ ಮುಖಂಡರು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಬ್ಬ ಎಂ.ಎಲ್.ಸಿ, ನಿಗಮ ಮಂಡಳಿಗಳಲ್ಲಿ ಕಡಬದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡಿ ಪಕ್ಷವನ್ನು  ಬೇರು ಮಟ್ಟದಿಂದ ಗಟ್ಟಿಗೊಳಿಸಿ ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಪೂರಕ ವಾತಾವರಣ ಸೃಷ್ಠಿಯಾಗಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಕಾಂಗ್ರೇಸ್ ವರಿಷ್ಠರ ಗಮನಸೆಳೆಯಲು ಯತ್ನಿಸಲಾಗುತ್ತಿದೆ ಎನ್ನುವ ಮಾಹಿತಿ ದೊರೆಯುತ್ತಿದೆ. 2024 ರಲ್ಲಿ ವಿಧಾನ ಸಭಾ ಕ್ಷೇತ್ರದ ಮರುವಿಂಗಡನೆಯಾಗುವುದರೊಂದಿಗೆ ಕಡಬ ಸ್ವತಂತ್ರ ಕ್ಷೇತ್ರವಾಗಿ ರೂಪುಗೊಳ್ಳುವ ಸಾಧ್ಯತೆಯಿದ್ದು ಕಡಬ ಕ್ಷೇತ್ರದಲ್ಲಿ ಪಕ್ಷ ಬಲಗೊಳಿಸಬೇಕು ಎನ್ನುವ ದೃಢ ಸಂಕಲ್ಪ ಮಾಡಿರುವ ಇಲ್ಲಿನ ಕಾಂಗ್ರೇಸ್ ನಾಯಕರು ಸರಕಾರಿ ಪೋಷಿತ ಸಂಸ್ಥೆಗಳ ಹುದ್ದೆಗಳನ್ನು ಪಡೆಯಲು ತೆರೆಮರೆಯಲ್ಲಿ ಕಸರತ್ತು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ನಿಗ ಮಂಡಳಿ ಅಧ್ಯಕ್ಷ / ಎಂ.ಎಲ್.ಸಿ. ನೀಡಿ

ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಕಡಬದ ನೂತನ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾವು ಶ್ರಮಿಸಬೇಕಾಗಿದೆ. ತಾಲೂಕಿನ ಮೂಲಭೂತ ವ್ಯವಸ್ಥೆಗಳನ್ನು ಸಂಬಂಧಪಟ್ಟ ಎಲ್ಲಾ ಸರಕರಿ ಕಛೇರಿಗಳನ್ನು ತಂದು ಪೂರ್ಣ ಪ್ರಮಾಣದ ತಾಲುಕು ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುವ ಬದ್ಧತೆ ನಮ್ಮ ಮೇಲಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ನಿಗಮ ಮಂಡಳಿಗಳಲ್ಲಿ ಕಡಬಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡುತ್ತಾ ಬರಲಾಗಿದೆ, ಈ ಬಾರಿ ನಿಗಮಗಳಲ್ಲಿ  ಕಡಬಕ್ಕೆ ಆದ್ಯತೆ ನೀಡಬೇಕು ಹಾಗೂ ಸುಳ್ಯ ಕ್ಷೇತ್ರದ ಒಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನಿಡಬೇಕು, ಆ ಮೂಲಕ ಕ್ಷೇತ್ರದ ಹಾಗೂ ಕಡಬದ ಅಭಿವೃದ್ಧಿಗೆ ಕೊಡುಗೆ ನೀಡಬೇಕು.

ಪಿ.ಪಿ.ವರ್ಗೀಸ್, ಕಡಬ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top