ಪುತ್ತೂರು: ಕಾರ್ಯಕರ್ತರು ಮತ್ತು ಪಕ್ಷದ ನಾಯಕರ ಅವಿರತ ಶ್ರಮದ ಫಲವಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ, ಈ ಗೆಲುವು ನನ್ನದಲ್ಲ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವಾಗಿದೆ. ಪಕ್ಷಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯಬೇಕಾಗಿದ್ದು, ನಾಳೆಯಿಂದಲೇ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮತ್ತೆ ಆರಂಭವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಹೇಳಿದರು.
ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ,ಜನರ ಸಮಸ್ಯೆಗಳನ್ನು ಬೂತ್‌ಮಟ್ಟದಲ್ಲೇ ಅರಿಯುವ ಕೆಲಸವನ್ನು ಗ್ರಾಮ ಮಟ್ಟದ ಮುಖಂಡರು ಮಾಡಬೇಕು. ಯಾವುದೇ ಪಕ್ಷ ಬೇದವಿಲ್ಲದೆ ಎಲ್ಲರನ್ನೂ ಅಭಿವೃದ್ದಿಯ ಜತೆ ಸೇರಿಸಿಕೊಳ್ಳಬೇಕು. ಎಲ್ಲರನ್ನೂ ಜತೆಯಾಗಿ ಕರೆದುಕೊಳ್ಳುವ ಮೂಲಕ ಪಕ್ಷಕ್ಕೆ ಇನ್ನಷ್ಟು ಜನರನ್ನು ಸೆಳೆಯುವ ಕೆಲಸವನ್ನು ಮಾಡಬೇಕು. ಮುಂದಿನ ೨೫ ವರ್ಷಗಳ ಕಾಲ ಪುತ್ತೂರಿನಲ್ಲಿ ಕಾಂಗ್ರೆಸ್ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಚರ್ಚೆಗಳನ್ನು ಮಾಡದೆ ಪಕ್ಷಕ್ಕೆ ಪೂರಕವಾದ ಚರ್ಚೆಗಳನ್ನು ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದ ಅವರು ನಾನು ಪುತ್ತೂರಿನ ಸಮಗ್ರ ನಾಗರಿಕರ ಶಾಸಕನಾಗಿದ್ದು ಯಾವಾಗ ಎಲ್ಲಿ ಬೇಕಾದರೂ ನನ್ನನ್ನು ಸಂಪರ್ಕಿಸಬಹುದಾಗಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಕಾಂಗ್ರೆಸ್ ಮುಖಂಡರಾದ ವಕೀಲ ಭಾಸ್ಕರ ಗೌಡ ಕೋಡಿಂಬಾಳ, ನಝೀರ್ ಮಠ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶುಕೂರ್ ಹಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಮುರಳೀಧರ್ ರೈ ಮಠಂತಬೆಟ್ಟು ವಂದಿಸಿದರು.