ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 70ರ ಗಡಿಯತ್ತಲೂ ಬರದಂತೆ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್‌ಗೆ ಈಗ ಮುಖ್ಯಮಂತ್ರಿ ಆಯ್ಕೆ ವಿಚಾರವೇ ದೊಡ್ಡ ಕಗ್ಗಂಟಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಗಾದಿಗಾಗಿ ಭಾರಿ ಪೈಪೋಟಿ ನಡೆಯುತ್ತಿದ್ದು, ಇಬ್ಬರು ನಾಯಕರು ಇಂದು ದಿಲ್ಲಿಯತ್ತ ಹೋಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯಾಹ್ನ 1 ಗಂಟೆ ಬಳಿಕ ದಿಲ್ಲಿಗೆ ತೆರಳಿದ್ದಾರೆ. ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಎಚ್ಎಎಲ್ ನಿಂದ ಸಿದ್ದರಾಮಯ್ಯ ಅವರು ದಿಲ್ಲಿಗೆ ಹಾರಲಿದ್ದಾರೆ. ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿರುವ ವಿಶೇಷ ವಿಮಾನದಲ್ಲೇ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದಿಲ್ಲಿಗೆ ಹೋಗುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾಗಿತ್ತು. ಆದರೆ, ಮಧ್ಯಾಹ್ನ ಒಂದು ಗಂಟೆಯ ಬಳಿಕ ಅವರು ಕೂಡ ಹೈಕಮಾಂಡ್ ಭೇಟಿಯಾಗಲಿದ್ದಾರೆ. ಸಿಎಂ ಸ್ಥಾನಕ್ಕಾಗಿ ಇಬ್ಬರು ನಾಯಕರ ನಡುವೆ ಪೈಪೋಟಿ ಇರುವ ಕಾರಣ ಬಹುತೇಕ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಮೊರೆ ಹೋಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಅಧಿಕಾರ ಹಂಚಿಕೆ ಸೂತ್ರ ಪಾಲಿಸಲು ಹೆಚ್ಚಿನ ಒತ್ತು ಕೊಡುವ ಸಾಧ್ಯತೆ ಇದೆ. ಮೂರು ವರ್ಷ ಸಿದ್ದರಾಮಯ್ಯ ಮತ್ತು ಎರಡು ವರ್ಷ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಂಚಬಹುದು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ಕೂರಿಸಿಕೊಂಡು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಲಿದ್ದಾರೆ.
ಶೇ.40 ಕ್ಕಿಂತ ಹೆಚ್ಚು ಮಂದಿ ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ನಮೂದು ಮಾಡಿದ್ದಾರೆ. ಹೀಗಾಗಿ ಹೊಸ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ. ಬೆಂಗಳೂರಿನ ಹೋಟೆಲ್‌ನಲ್ಲಿ ಭಾನುವಾರ ತಡರಾತ್ರಿ ಆರಂಭವಾದ ಸಭೆ ಮಧ್ಯರಾತ್ರಿ 1.30ರ ವರೆಗೆ ನಡೆಯಿತು. ಇದರಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 135 ಶಾಸಕರು ಭಾಗವಹಿಸಿದ್ದರು. ಮುಂದಿನ ಸಿಎಂ ಯಾರಾಗಬೇಕು ಎಂದು ಗುಪ್ತ ಮತದಾನ ಮಾಡಲಾಗಿದೆ. ಬಹುತೇಕ ಶಾಸಕರು ಲಿಖಿತ ರೂಪದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಇನ್ನು, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಮಾತ್ರ ತಾವು ಸಿದ್ದರಾಮಯ್ಯಗೆ ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ತಮ್ಮನಾಯಕನಿಗೆ ಸಿಎಂ ಸ್ಥಾನ ಸಿಗಲಿ ಎಂದು ಪೂಜೆ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮನ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು ಸಂಜೆಯೊಳಗೆ ಸಿಎಂ ಘೋಷಣೆ ಸಾಧ್ಯತೆಯಿದೆ.