ಮುಂಬಯಿ : ಮಂಗಳೂರಿನಿಂದ ಮುಂಬಯಿಗೆ ಹೋಗುತ್ತಿದ್ದ ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಂದಾಪುರದಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿ ನಗ-ನಗದು ದರೋಡೆ ಮಾಡಿರುವ ಆಘಾತಕಾರಿ ಘಟನೆ ಶುಕ್ರವಾರ ಸಂಭವಿಸಿದೆ. ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ಇದ್ದ ವೇಳೆ ಥಾಣೆ ಮತ್ತು ಕಾಂಜೂರ್‌ಮಾರ್ಗ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.
32ರ ಹರೆಯದ ವಿರಾರ್ ನಿವಾಸಿ ಮಹಿಳೆ ಕುಂದಾಪುರದಲ್ಲಿ ಕಳೆದ ಏಪ್ರಿಲ್‌ನಲ್ಲಿ ಬೈಪಾಸ್ ಸರ್ಜರಿಯಾಗಿರುವ ತಾಯಿಯನ್ನು ನೋಡಿಕೊಳ್ಳಲು ಹೋಗಿ ಹಿಂದಿರುಗುತ್ತಿದ್ದರು.
ರೈಲು ಥಾಣೆ ನಿಲ್ದಾಣ ತಲುಪಿದಾಗ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಮೂವರು ಪ್ರಯಾಣಿಕರು ಮಾತ್ರ ಇದ್ದರು. ಇಬ್ಬರು ಥಾಣೆ ನಿಲ್ದಾಣದಲ್ಲಿ ಇಳಿದ ಬಳಿಕ ರೈಲು ಹೊರಡುತ್ತಿದ್ದಂತೆ ದುಷ್ಕರ್ಮಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿ ಓಡಿಕೊಂಡು ಬಂದು ಹತ್ತಿದ್ದಾನೆ. ಮಹಿಳೆ ಅವನನ್ನು ಗದರಿಸಲು ಮುಂದಾದಾಗ ಬಾಯಿಮುಚ್ಚಿ ಕುಳಿತುಕೊಳ್ಳಲು ಹೇಳಿದ್ದಾನೆ. ಮಹಿಳೆ ಪೊಲೀಸರಿಗೆ ಫೋನ್ ಮಾಡಲು ಮುಂದಾದಾಗ ಫೋನ್ ಕಸಿದು ನೆಲಕ್ಕೆ ಅಪ್ಪಳಿಸಿ ಹಲ್ಲೆ ಮಾಡಿದ್ದಾನೆ. ಅವನ ಏಟಿಗೆ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು. ರೈಲು ಕಾಂಜೂರುಮಾರ್ಗ ನಿಲ್ದಾಣಕ್ಕೆ ತಲುಪಿದಾಗ ಎಚ್ಚೆತ್ತ ಮಹಿಳೆ ಚೈನ್ ಎಳೆದು ರೈಲು ನಿಲ್ಲಿಸಿ ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನರನ್ನು ಸಹಾಯಕ್ಕಾಗಿ ಕೂಗಿದರು. ಆದರೆ ಅಷ್ಟರಲ್ಲಿ ದರೋಡೆಕೋರ ಅವರ ಕತ್ತಿನಲ್ಲಿದ್ದ ಮಂಗಲಸೂತ್ರ ಮತ್ತು ಪರ್ಸ್ ಕಿತ್ತುಕೊಂಡು ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಹಾರಿ ಪಲಾಯನ ಮಾಡಿದ್ದಾನೆ.
ನಂತರ ಪೊಲೀಸರು ಮಹಿಳೆನ್ನು ದಾದರ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಇಲ್ಲಿ ಅವರ ಪತಿ ಅವರನ್ನು ಕರೆದುಕೊಂಡು ಹೋಗಲು ಬಂದು ಕಾಯುತ್ತಿದ್ದರು. ಅವರ ಜತೆ ಸಯನ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಆರೋಪಿಯ ಗುರುತು ಪತ್ತೆಯಾಗಿದ್ದು, ಕ್ರಿಮಿನಲ್ ಹಿನ್ನೆಲೆಯಿರುವ ಆತ ಕೋವಿಡ್ ಕಾಲದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.