ಪುತ್ತೂರು: ಮಂಗಳೂರಿನ ಕುಲಶೇಖರಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನದ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೇ 14 ರಿಂದ 25 ರ ತನಕ ನಡೆಯಲಿದ್ದು, ಮೇ.14 ರಂದು ಪುತ್ತೂರು ಕುಲಾಲರ ಯಾನೆ ಮೂಲ್ಯರ ಸಂಘದ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಪುತ್ತೂರು ತಾಲೂಕು ಕುಲಾಲ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 1200 ವರ್ಷಗಳ ಇತಿಹಾಸ ಇರುವ ದೇವಸ್ಥಾನ ಸುಮಾರು 10 ಕೋಟಿ ರೂ. ವಚ್ಚದಲ್ಲಿ ಪುನರ್ ನಿರ್ಮಾಣಗೊಂಡಿದ್ದು, ಈ ಭಾಗದ ಕುಲಾಲ ಬಾಂಧವರಿಗೆ ಹೊರೆಕಾಣಿಕೆ ಸಮರ್ಪಣೆ ಕುರಿತು ಅರಿವು ಮೂಡಿಸಲು ಪತ್ರಿಕಾಗೋಷ್ಟಿ ಕರೆಯಲಾಗಿದೆ ಎಂದು ತಿಳಿಸಿದರು.
ಮೇ.14 ರಂದು ಎಲ್ಲಾ ಕಡೆಗಳಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸುಳ್ಯ, ಪುತ್ತೂರಿನಲ್ಲಿ ಹೊರೆಕಾಣಿಕೆ ಸಮರ್ಪಿಸುವವರು ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ತಲುಪುವುದು. ಒಂದು ಗಂಟೆಗೆ ಮೆರವಣಿಗೆ ಮೂಲಕ ತೆರಳುವುದು. ಬೆಳ್ತಂಗಡಿ ಭಾಗದಿಂದ ಮೆರವಣಿಗೆ ಬಂಟ್ವಾಳದಲ್ಲಿ ಅಲ್ಲಿಂದ ಹೊರಟು ಕಾಸರಗೋಡು, ಉಡುಪಿ ಭಾಗದಿಂದ ಬರುವ ಮೆರವಣಿಗೆ ನಂತೂರು ವೃ್ತ್ತದಲ್ಲಿ ಸೇರಿ ಅಲ್ಲಿಂದ ಒಟ್ಟಿಗೆ ಶ್ರೀ ಕ್ಷೇತ್ರಕ್ಕೆ ತೆರಳಲಿದೆ ಎಂದು ಅವರು ತಿಳಿಸಿದರು.
ಕುಲಾಲ ಸಮಾಜ ಬಾಂಧವರು ಪ್ರತಿ ಮನೆಯವರು ಹೊರೆಕಾಣಿಕೆ ಸಮರ್ಪಿಸಬೇಕಾಗಿದ್ದು, ಎಲ್ಲರೂ ಭಾಗವಹಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ಡಾ. ಚಂದ್ರಶೇಖರ, ಕಾರ್ಯದರ್ಶಿ ಜನಾರ್ದನ ಸಾರ್ಯ, ಸಹ ಸಂಚಾಲಕರಾದ ಯಶವಂತ ಪಿ ವಿ
ಜನಾರ್ದನ ಸಿಟಿ ಗುಡ್ಡೆ ಉಪಸ್ಥಿತರಿದ್ದರು.