ಪುತ್ತೂರು: ಒಂದು ಬದ್ಧತೆಗಾಗಿ ಚುನಾವಣೆ ಎದುರಿಸಿದ್ದೇವೆ. ಸ್ಪಷ್ಟ ಸಂದೇಶವನ್ನು ನಾಯಕರಿಗೆ ನೀಡಿದ್ದೇವೆ. ಚುನಾವಣಾ ಆಯೋಗ ತಿಳಿಸಿದ ಪರಿಮಿತಿಯೊಳಗಡೇ ಖರ್ಚು – ವೆಚ್ಚಗಳನ್ನು ಸರಿದೂಗಿಸಿದ್ದೇವೆ. ಇದನ್ನೆಲ್ಲಾ ಕಾರ್ಯಕರ್ತರೇ ನಿರ್ವಹಿಸಿದ್ದು, ಆದ್ದರಿಂದ ಚುನಾವಣೆಯ ಗೆಲುವು ಕಾರ್ಯಕರ್ತರ ಗೆಲುವು ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಕಾರ್ಯಕರ್ತರಿಂದ, ಮತದಾರರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಿರೀಕ್ಷೆಗೂ ಮೀರಿದ ಪ್ರೋತ್ಸಾಹ, ಬೆಂಬಲ ವ್ಯಕ್ತವಾಗಿದೆ. ಹಾಗಾಗಿ ಚುನಾವಣೆಯಲ್ಲಿ ಗೆಲುವು ಪಡೆಯುವುದು ನಿಶ್ಚಿತ. ಸುಮಾರು 8ರಿಂದ 9 ಸಾವಿರ ಮತಗಳ ಅಂತರದಿಂದ ಗೆಲುವು ಪಡೆಯಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
40 ಲಕ್ಷ ರೂ. ಒಳಗಡೆ ಚುನಾವಣಾ ಖರ್ಚು ವೆಚ್ಚಗಳನ್ನು ನಿರ್ವಹಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿತ್ತು. ಅದರಂತೆ 40 ಲಕ್ಷ ರೂ. ಒಳಗಡೆಯೇ ನಮ್ಮ ಖರ್ಚು – ವೆಚ್ಚಗಳು ಆಗಿವೆ. ಅವನ್ನೆಲ್ಲಾ ನಮ್ಮ ಕಾರ್ಯಕರ್ತರೇ ನಿರ್ವಹಿಸಿದ್ದು, ನನಗೆ ಯಾವುದೇ ಹೊರೆ ಮಾಡಿಲ್ಲ ಎಂದರು.
ಕಾರ್ಯಕರ್ತರನ್ನು ಅವಗಣನೆ ಮಾಡಿದರೆ ಏನಾಗುತ್ತದೆ ಎನ್ನುವ ಸ್ಪಷ್ಟ ಸಂದೇಶವನ್ನು ನಾವು ನೀಡಿದ್ದೇವೆ. ಮುಂದೆ ಇಂತಹ ತಪ್ಪು ಆಗಬಾರದು. ಕಾರ್ಯಕರ್ತರೇ ನಮ್ಮ ಆಧಾರ. ಹಾಗಿರುವಾಗ, ಕಾರ್ಯಕರ್ತರನ್ನು ಕಡೆಗಣಿಸಿ ಹೋಗುವುದು ಸರಿಯಲ್ಲ. ಇದರ ಬಗ್ಗೆ ನಾಯಕರಿಗೆ ಸ್ಪಷ್ಟ ಸಂದೇಶ ನೀಡುವ ಕೆಲಸ ಮಾಡಬೇಕಿತ್ತು. ಅದು ಈ ಚುನಾವಣೆಯ ಮೂಲಕ ನಡೆದಿದೆ ಎಂದರು.