ಮಂಗಳೂರು: ಮಂಗಳೂರಿನ ಪುರಾಣ ಪ್ರಸಿದ್ಧ ಐತಿಹಾಸಿಕ ಕದ್ರಿ ದೇಗುಲಕ್ಕೆ ಅಪರಿಚಿತರು ಬೈಕ್‌ನೊಂದಿಗೆ ನುಗ್ಗಿರುವ ಘಟನೆ ನಡೆದಿದೆ.
ಮೂವರು ಯುವಕರು ಬೈಕ್ನೊಂದಿಗೆಯೇ ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಅನುಮಾನಾಸ್ಪದವಾಗಿ ದೇಗುಲ ಪ್ರವೇಶಿಸಿದವರನ್ನು ಸ್ಥಳೀಯರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್, ಜಾಫರ್, ಫಾರೂಕ್‌ನನ್ನು ಕದ್ರಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಠಾಣೆಯಲ್ಲಿ ವಶಕ್ಕೆ ಪಡೆದಿರುವವರ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಶಂಕಿತ ಉಗ್ರ ಶಾರಿಕ್ ಕದ್ರಿ ದೇಗುಲ ಟಾರ್ಗೆಟ್ ಮಾಡಿದ್ದ. ಕದ್ರಿ ದೇಗುಲದ ಆವರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕದ್ರಿ ಟಾರ್ಗೆಟ್ ಮಾಡಿದ್ದ ಶಾರಿಕ್
ಕಳೆದ ವರ್ಷ ನಡೆದ ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಶಾರಿಕ್ ಹಿಂದೂಗಳ ರೀತಿ ವೇಷ ಹಾಕಿಕೊಂಡು ಕರಾವಳಿ ಭಾಗದ 3 ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದ. ಈ ಪೈಕಿ ಕದ್ರಿಯ ದೇಗುಲವೂ ಒಂದು. ಮಂಗಳೂರಿನ ಕದ್ರಿಯ ಮಂಜುನಾಥಸ್ವಾಮಿ ದೇವಸ್ಥಾನದ ಲಕ್ಷ ದೀಪೋತ್ಸವದಲ್ಲಿ ಬಾಂಬ್ ಸ್ಫೋಟಿಸಲು ಶಾರಿಕ್ ಪ್ಲ್ಯಾನ್ ಮಾಡಿದ್ದನಂತೆ. ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಹಾಗೂ ಮಂಗಳಾದೇವಿ ದೇವಾಲಯಕ್ಕೂ ಸ್ಕೆಚ್ ಹಾಕಿದ್ದ ಎಂಬ ಬಗ್ಗೆ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಶಿವನ ಡಿಪಿ ಬೆನ್ನತ್ತಿದಾಗ ಶಂಕಿತ ಉಗ್ರ ಶಾರಿಕ್ ಸಂಚು ಬಯಲಾಗಿತ್ತು. ಸದ್ಯ ಉಗ್ರ ಶಾರಿಕ್ ಪೊಲೀಸರ ಕಸ್ಟಡಿಯಲ್ಲಿದ್ದಾನೆ.