ಅರುಣ್ ಕುಮಾರ್ ಪುತ್ತಿಲ ಅವರಿಂದ ಪ್ರಮುಖರ ಸಭೆ | ಅಪಪ್ರಚಾರ, ಅವಮಾನಗಳಿಗೆ ಮುಂದಿನ ದಿನದಲ್ಲಿ ಉತ್ತರ | 7-8 ಸಾವಿರ ಅಂತರಗಳಿಂದ ಗೆಲುವು ಪಡೆಯಲಿದ್ದೇವೆ

ಪುತ್ತೂರು: ಹಿಂದುತ್ವದ ಪರ ಇದ್ದೇವೆ ಎನ್ನುವ ಒಂದೇ ಯೋಚನೆಯೊಂದಿಗೆ ನನ್ನ ಜೊತೆ ಬಂದು ನಿಂತಿದ್ದಾರೆ. ನನ್ನ ಕೊನೆಯ ಉಸಿರು ಇರುವ ತನಕ ನಿಮ್ಮ ಜೊತೆಗೆ ಇರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಗುರುವಾರ ಸಂಜೆ ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.

ನಿಶ್ಚಿತವಾಗಿಯೂ ಈ ಬಾರಿಯ ಗೆಲುವು ನಮ್ಮದೇ. ಹಿಂದು ರಾಷ್ಟ್ರದ ಕಲ್ಪನೆಯನ್ನು ನಾವೆಲ್ಲ ಸೇರಿ ಸಾಕಾರಗೊಳಿಸೋಣ. ಸಿದ್ಧಾಂತ, ಬದ್ಧತೆಯ ಆಧಾರದಲ್ಲಿ ಹಿಂದು ಸಮಾಜಕ್ಕೆ ಶಕ್ತಿ ಕೊಡುವ ಕೆಲಸವನ್ನು ನಾವೆಲ್ಲ ಮಾಡೋಣ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.































 
 

ಧರ್ಮ ಆಧಾರಿತ ರಾಜಕಾರಣವನ್ನು ಮಾಡುತ್ತೇನೆ ಎಂದು ಹೇಳಿದ ಅವರು, ನಾವು, ನಮ್ಮ ಕಾರ್ಯಕರ್ತರು ಹಣದ ವಿಚಾರಕ್ಕೆ, ಅಧಿಕಾರದ ವಿಚಾರಕ್ಕೆ ಮಣಿಯುವುದಿಲ್ಲ. ಯಾವತ್ತಿದ್ದರೂ ಹಿಂದುತ್ವದ ಪರವಾಗಿ ಕೆಲಸ ನಿರ್ವಹಿಸುತ್ತೇವೆ. ಸಂಘರ್ಷಕ್ಕೆ, ಅವಮಾನಗಳಿಗೆ ಉತ್ತರ ಕೊಡುತ್ತೇವೆ. ಕಾರ್ಯಕರ್ತರಿಂದ ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿಸಿದ್ದು, ಪಕ್ಷೇತರ ಅಭ್ಯರ್ಥಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದೇನೆ ಎಂದರು.

ಕಳೆದ 20 ದಿನಗಳಿಂದ ಹಗಲು – ರಾತ್ರಿಯ ಪರಿವೇ ಇಲ್ಲದೇ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ. ಯಾರದೇ ಬಲವಂತಕ್ಕೆ ಮಣಿದಿಲ್ಲ. ಒಂದಿಷ್ಟೂ ಕೂಡ ಹಣದ ಮೋಹಕ್ಕೆ ಬಂದಿಲ್ಲ. ಇಂತಹ ಕಾರ್ಯಕರ್ತರೊಂದಿಗೆ ಗೆದ್ದು ಬಂದಾಗ, ಮಹಾಲಿಂಗೇಶ್ವರನ ಮಣ್ಣಿನಲ್ಲಿ ವಿಜಯೋತ್ಸವ ಆಚರಿಸಲಿದ್ದೇವೆ ಎಂದರು.

ಅರುಣಣ್ಣನಿಗೆ ಹಾಕದ ಮತ ಯಾಕೆ?

ಶಾಸಕರಾಗಿ ಆಯ್ಕೆಯಾಗಲಿರುವ ಪುತ್ತಿಲ ಅವರೇ ಎಂದು ಮಾತು ಆರಂಭಿಸಿದ ವೈದ್ಯ ಡಾ. ಸುರೇಶ್‌ ಪುತ್ತೂರಾಯ, ಅರುಣಣ್ಣನಿಗೆ ಹಾಕದ ಮತ ಯಾಕೆ? ಅಂತಹ ಮತವನ್ನು ಹಾಕಬೇಕೆಂದೇ ಇಲ್ಲ ಎಂದು ಅನೇಕ ಮಂದಿ ಹೇಳುವುದನ್ನು ಕೇಳಿದ್ದೇನೆ. ಪುತ್ತಿಲ ಅವರಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವುದನ್ನು ಈಗ ನೋಡುವಂತಾಯಿತು ಎಂದರು.

ದೇವದುರ್ಲಭ ಕಾರ್ಯಕರ್ತರು

ರಾಜಾರಾಮ್ ಭಟ್ ಮಾತನಾಡಿ, ದೇವದುರ್ಲಭ ಕಾರ್ಯಕರ್ತರು ಎಂಬ ಹೆಸರನ್ನು ಅನೇಕ ಬಾರಿ ಕೇಳಿದ್ದೇವೆ. ಆದರೆ ಅಂತಹ ಕಾರ್ಯಕರ್ತರನ್ನು ಪ್ರತ್ಯಕ್ಷವಾಗಿ ನೋಡುವ ಅನುಭವ ನಮಗಾಗಿದೆ ಎಂದ ಅವರು, ವೇದಿಕೆಯಿಂದಲೇ ಕಾರ್ಯಕರ್ತರಿಗೆ ಅಡ್ಡಬಿದ್ದು ನಮಸ್ಕರಿಸಿದರು.

ಅರುಣ್ ಕುಮಾರ್ ಪುತ್ತಿಲ ಅವರು ವ್ರತನಿಷ್ಠರಾಗಿ, ಬರಿಗಾಲಲ್ಲಿ ಪುತ್ತೂರನ್ನು ಸುತ್ತಿದ್ದಾರೆ. ಅವರ ನಿಷ್ಠೆಗೆ, ಕಾರ್ಯಕರ್ತರ ಪರಿಶ್ರಮದಿಂದಾಗಿ ಅರುಣ್ ಕುಮಾರ್ ಪುತ್ತಿಲ ಅವರು ಜಯಶಾಲಿ ಆಗುತ್ತಾರೆ. ಇನ್ನು ಮಾರ್ಜಿನ್ ಎಷ್ಟು ಎಂದು ನೋಡಲು ಅಷ್ಟೇ ಇರುವುದು ಎಂದರು.

ಸಚಿವರಾಗಿ ನೇಮಕರಾಗಲಿ

ಹರಿಣಿ ಪುತ್ತೂರಾಯ ಮಾತನಾಡಿ, ಅರುಣಣ್ಣ ಶಾಸಕರಾಗಿ ಆಯ್ಕೆಯಾಗಿ, ರಾಜ್ಯದಲ್ಲಿ ಉತ್ತಮ ಸ್ಥಾನ ಪಡೆಯುವ ಜೊತೆಗೆ ಸಚಿವರಾಗಿ ನೇಮಕರಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಉದ್ಯಮಿ ರಾಜಶೇಖರ್, ಪ್ರಸನ್ನ ಕುಮಾರ್ ಮಾರ್ತಾ ಉಪಸ್ಥಿತರಿದ್ದರು. ಇದೇ ಸಂದರ್ಭ ಮನೀಷ್ ಕುಲಾಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top