ಪುತ್ತೂರು: ಈ ಬಾರಿ ಉತ್ತಮ ಮತದಾನವಾಗಿದ್ದು, ಶೇ. 80ರಷ್ಟು ಮತದಾರರು ಮತದಾನ ಮಾಡಿದ್ದಾರೆ. ಇದರಲ್ಲಿ 75 ಸಾವಿರದಿಂದ 80 ಸಾವಿರದಷ್ಟು ಮತಗಳು ಬಿಜೆಪಿ ಪರವಾಗಿ ಬಿದ್ದಿವೆ ಎಂದು ಶಾಸಕ ಸಂಜೀವ ಮಠಂದೂರು ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳು, ಹಿಂದುತ್ವಕ್ಕೆ ಒತ್ತು ನೀಡಿರುವ ಕ್ರಮ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡಿರುವ ಸಮರೋಪಾದಿ ಕೆಲಸಗಳ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬಹುಮತದಿಂದ ಗೆದ್ದು ಬರಲಿದ್ದಾರೆ ಎಂದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 90 ಸಾವಿರ ಮತಗಳು ಬಿಜೆಪಿ ಪರವಾಗಿ ಬಿದ್ದಿತ್ತು. ಈ ಬಾರಿ ಚುನಾವಣೆಯಲ್ಲಿ ಉತ್ತಮ ಮತದಾನವಾಗಿರುವುದನ್ನು ಗಣನೆಗೆ ತೆಗೆದುಕೊಂಡಾಗ, ಸುಮಾರು 75ರಿಂದ 80 ಸಾವಿರದಷ್ಟು ಮತಗಳು ಬಿಜೆಪಿ ಪರವಾಗಿ ಬಿದ್ದಿವೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗೆಲ್ಲುವುದು ನಿಶ್ಚಿತ ಎಂದು ಆತ್ಮವಿಶ್ವಾಸದಿಂದ ನುಡಿದರು.
ಚುನಾವಣೆಯ ದಿನ ನಾವೆಲ್ಲಾ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳಿಗೆ ಭೇಟಿ ನೀಡಿದ್ದೇವೆ. ಆಗ ಮತದಾರರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನ ಕೊಂಡಾಡುತ್ತಿದ್ದಾರೆ. ಕೆಲಸ ಕಾರ್ಯಗಳು ಬೂತ್ ನ ಮನೆಮನೆಗೆ ತಲುಪಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳು ವ್ಯಕ್ತಿಗತವಾಗಿ ತಲುಪಿವೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕೆಲಸಗಳು ವ್ಯಕ್ತಿಗತ ಹಾಗೂ ಜನಪರ ಕಾರ್ಯಕ್ರಮಗಳು ಎಲ್ಲರನ್ನೂ ತಲುಪಿವೆ. ಶಾಸಕತ್ವದ ನನ್ನ ಅವಧಿಯಲ್ಲಿ 1. 2 ವರ್ಷ ವಿರೋಧ ಪಕ್ಷದ ಆಡಳಿತದಲ್ಲಿ, 1 ವರ್ಷದಷ್ಟು ಸಮಯ ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಅನುದಾನ ಇಲ್ಲದೇ ಕೆಲಸ, ಉಳಿದ 2.5 ವರ್ಷದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಸಂಕಲ್ಪದಂತೆ ಸಾಕಷ್ಟು ಯೋಜನೆಗಳನ್ನು, ಕೆಲಸಗಳನ್ನು ಜನರಿಗೆ ನೀಡಿದ್ದೇವೆ. ಇದು ಜನಮಾನಸದಲ್ಲಿ ಉಳಿದಿವೆ. ಇದು ಮತದಾನವಾಗಿ ಪರಿವರ್ತನೆಯಾಗಿದೆ ಎಂದರು.