ಪುತ್ತೂರು: ಚುನಾವಣೆಯಲ್ಲಿ ಗೆಲುವಿನ ಅಲೆ ನಮ್ಮ ಪರವಾಗಿದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಕಾಂಗ್ರೆಸ್ ಈ ಬಾರಿ ಗೆಲುವುದು ಖಂಡಿತಾ. ಪುತ್ತೂರಿನಲ್ಲಿ 25ರಿಂದ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಚುನಾವಣೆ ಉತ್ತಮ ರೀತಿಯಲ್ಲಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಚುನಾವಣೆಯಲ್ಲಿ ಮತದಾರರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರಿಗೆ ಅಭಿನಂದಿಸಿದರು. ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷ ಗೆದ್ದ ಬಳಿಕ, ಕಾರ್ಯಕರ್ತರು ಸೌಹಾರ್ದಯುತವಾಗಿ ವರ್ತಿಸಬೇಕು. ಯಾರಿಗೂ ನೋವುಂಟು ಮಾಡಬಾರದು. ಒಂದು ವೇಳೆ ಹಿಂದಿನ ಸಲ ನಮಗೆ ನೋವುಂಟು ಮಾಡಿದ್ದಾರೆ ಎಂದರೂ, ನಾವು ಅವರಿಗೆ ನೋವುಂಟು ಮಾಡುವುದು ಬೇಡ. ಬೇರೆ ಬಂಧುಗಳನ್ನು ನಿಂಧಿಸುವುದೂ ಬೇಡ. ಬೇರೆ ಪಕ್ಷದವರ ಕಂಪೌಂಡ್ ಗೋಡೆ ಪಕ್ಕದಲ್ಲಿ ಪಟಾಕಿ ಸಿಡಿಸುವ ಕೆಲಸವನ್ನೂ ಮಾಡುವುದು ಬೇಡ. ಒಟ್ಟಿನಲ್ಲಿ ಸೌಹಾರ್ದಯುತ ವಾತಾವರಣ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಜನ ನಮ್ಮನ್ನು ಗೌರವಿಸಬೇಕು, ಸ್ವಾಗತಿಸಬೇಕು. ಅಂತಹ ವಾತಾವರಣ ನಾವು ನಿರ್ಮಾಣ ಮಾಡಬೇಕು. ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ, ಹಾರ – ಸನ್ಮಾನ ಮಾಡುವುದು ಬೇಡ. ಇಂತಹ ಯಾವುದೇ ದುಂದುವೆಚ್ಚಗಳಿಗೆ ಅವಕಾಶವೇ ನೀಡಬೇಡಿ. ಬೇಕಿದ್ದರೆ ಒಂದು ಶಾಲು ಹಾಕಿದರೆ ಸಾಕು. ದುಂದುವೆಚ್ಚಕ್ಕಾಗಿ, ಸನ್ಮಾನಕ್ಕಾಗಿ ಬಳಸುವ ಹಣವನ್ನು ಬಡವರಿಗೆ, ಅಶಕ್ತರಿಗೆ ನೀಡಿ ಎಂದು ಮನವಿ ಮಾಡಿಕೊಂಡ ಅವರು ಮನವಿ ಮಾಡಿಕೊಂಡರು.