ಕಡಬ: ಕಡಬ ತಾಲೂಕಿನಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಅಲ್ಲಲ್ಲಿ ಮತಯಂತ್ರ ಕೆಟ್ಟು ಹೋಗಿ ಮತದಾನ ಸ್ವಲ್ಪ ಮಟ್ಟಿನ ವಿಳಂಬವಾಗಿತ್ತು.
ಕೊಯಿಲ ಗ್ರಾಮದ ಸಬಳೂರು ಸರಕಾರಿ ಶಾಲೆಯಲ್ಲಿನ ಮತಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟು ಸುಮಾರು ಅರ್ಧ ಗಂಟೆ ಹೊತ್ತು ಮತದಾರರು ಹಾಗೂ ಮತಗಟ್ಟೆಯ ಅಧಿಕಾರಿಗಳು ಚಡಪಡಿಸುವಂತಾಗಿತ್ತು. ಮತದಾನ ಮಾಡಲು ಬಂದವರ ಸರತಿ ಸಾಲು ಹನುಮಂತನ ಬಾಲದಂತೆ ಉದ್ದವಾಗುತ್ತಾ ಹೊಯಿತು. ಮತಯಂತ್ರ ದುರಸ್ತಿಯಾದ ಬಳಿಕ ಮತದಾನ ಸಲೀಸಾಗಿ ನಡೆಯಿತು.
ಇದೇ ಪರಿಸ್ಥಿತಿ ತಾಲೂಕಿನ ಬಲ್ಯ ಗ್ರಾಮದ ಬಲ್ಯ ಮತಗಟ್ಟೆ ಸಂಖ್ಯೆ 50 ರಲ್ಲಿ ಕೂಡಾ ಸಂಭವಿಸಿ ಸ್ವಲ್ಪ ಹೊತ್ತು ಮತದಾನ ಸ್ಥಗಿತಗೊಂಡಿತ್ತು. ರಾಮಕುಂಜ ಗ್ರಾಮದ ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಕಡಬ ಸರಕಾರಿ ಪ್ರೌಢ ಶಾಲೆ ಹಾಗು ಇನ್ನಿತರ ಕೆಲವು ಬೂತ್ ಗಳಲ್ಲಿ ಮತಯಂತ್ರ ಕೆಟ್ಟು ಮತದಾನಕ್ಕೆ ಸಂಚಕಾರ ಉಂಟಾಗಿತ್ತು.