ಕಡಬ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರತಿ ಮುರುಳ್ಯ ಸೋಮವಾರ ಸಂಜೆ ಕಡಬ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಕಡಬ ತಾಲೂಕು ಕಛೇರಿಯಿಂದ ಮೇಲಿನ ಪೇಟೆಯ ತನಕ ಪಾದಯಾತ್ರೆ ಮಾಡಿ ಮತಯಾಚಿಸಿದರು. ಬಳಿಕ ಕಡಬ ಬಸ್ನಿಲ್ದಾಣದ ಬಳಿ ನಡೆದ ಸಭೆಯಲ್ಲಿ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರನ್ನು ಹೊದಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಅಚಲವಾದ ಶಕ್ತಿಯಿಂದಲೇ ಗಟ್ಟಿಯಾಗಿ ಬೆಳೆದು ನಿಂತಿದೆ, ನನ್ನಂತಹ ಒಬ್ಬ ಬೀಡಿ ಕಾರ್ಮಿಕೆ, ಕೂಲಿ ಕಾರ್ಮಿಕೆಯನ್ನು ಬೆಳೆಸಿ ನಾಯಕತ್ವ ನೀಡಿ ಇದೀಗ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಿದೆ, ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ, ನಮ್ಮ ಪಕ್ಷದ, ಸಂಘದ ಹಿರಿಯರು ನನಗೆ ನೀಡಿರುವ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಮತದಾರ ಪ್ರಭುಗಳು ಆಶೀರ್ವಾದ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥಾರಾಮ, ಬಿಜೆಪಿ ಮುಖಂಡರಾದ ರಾಮದಾಸ್ ಬಂಟ್ವಾಳ, ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಕೃಷ್ಣ ಶೆಟ್ಟಿ ಕಡಬ, ಪುಲಸ್ತ್ಯಾ ರೈ, ಬೂಡಿಯಾರ್ ರಾಧಾಕೃಷ್ಣ ರೈ, ಭಾಸ್ಕರ ಗೌಡ ಇಚ್ಲಂಪಾಡಿ, ಸುಭೋದ್ ರೈ ಮೇನಾಲ, ವಾಡ್ಯಪ್ಪ ಗೌಡ ಎರ್ಮಾಯಿಲ್, ವೆಂಕಟ್ ವಳಲಂಬೆ, ತೇಜಸ್ವಿನಿ ಕಟ್ಟಪುಣಿ, ಪಿ.ವೈ.ಕುಸುಮಾ, ಸರೋಜಿನಿ ಬಿಳಿನೆಲೆ, ಶಿವಪ್ರಸಾದ್ ರೈ ಮೈಲೇರಿ, ಎ.ಪಿ.ಗಿರೀಶ್, ಕೇಶವ ಬೇರಿಕೆ ಮತ್ತಿತರರು ಉಪಸ್ಥಿತರಿದ್ದರು.