ಪುತ್ತೂರು: ಹೈವೋಲ್ಟೇಜ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸುವುದು ನಿಶ್ಚಿತ. ಹೀಗೆಂದು ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳ ವರದಿ ದೃಢಪಡಿಸಿದೆ.
ಆರಂಭದಿಂದಲೂ ಭಾರೀ ಹಣಾಹಣಿಯ ಕ್ಷೇತ್ರವಾಗಿ ಪುತ್ತೂರು ಮೂಡಿಬಂದಿತ್ತು. ಪ್ರಬಲ ಪೈಪೋಟಿ, ನೇರಾ – ನೇರ ಸ್ಪರ್ಧೆ ಹೀಗೆ ಎಲ್ಲಾ ಆಯಾಮಗಳಲ್ಲೂ ರಾಜ್ಯದ ಗಮನ ಸೆಳೆದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಮತದಾರರು ಒಂದಷ್ಟು ಗೊಂದಲಗಳಿಗೆ ಒಳಗಾಗಿದ್ದು ಕೂಡ ನಿಜ.
ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ದಿನ ಸನ್ನಿಹಿತವಾಗುತ್ತಿದೆ. ಮತದಾರ ತನ್ನ ನಿರ್ಧಾರ ತಿಳಿಸುವ ಮೊದಲು, ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ 220 ಬೂತ್ ಗಳ ವರದಿಯನ್ನು ಸಂಘ ಪರಿವಾರ ಹಾಗೂ ಬಿಜೆಪಿ ತರಿಸಿಕೊಂಡಿದೆ. ಈ ವರದಿಯ ಪ್ರಕಾರ, ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಲಾಗಿದೆ.
ಬಿಜೆಪಿಯ ಅಭಿವೃದ್ಧಿ ಕಾರ್ಯಗಳು, ಡಬಲ್ ಇಂಜಿನ್ ಸರಕಾರದಲ್ಲಿ ಜನರಿಟ್ಟಿರುವ ನಂಬಿಕೆ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರಿಗೆ ಬೆಂಬಲ ಹಾಗೂ ಹಿಂದುತ್ವದ ಆಧಾರದಲ್ಲಿ ಜನರು ಬಿಜೆಪಿಯನ್ನು ನೆಚ್ಚಿಕೊಂಡಿದ್ದಾರೆ ಎಂದು ಬೂತ್ ಮಟ್ಟದ ವರದಿ ತಿಳಿಸಿದೆ.
ಸಣ್ಣ ಅಂತರದ ಗೆಲುವು:
ವರದಿ ಪ್ರಕಾರ, ಪುತ್ತೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಜಿದ್ದಾಜಿದ್ದಿನ ಕಣವಾಗಿ ಪರಿವರ್ತನೆಯಾಗಿತ್ತು. ಯೋಗಿ ಆದಿತ್ಯನಾಥ್ ಅವರು ಪುತ್ತೂರಿಗೆ ಬಂದು ಮತದಾರರನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ವಿಶೇಷವಾಗಿ ಯುವ ಮತದಾರರು ಬಿಜೆಪಿ ಕಡೆ ಒಲವು ತೋರಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಯೋಗಿ ಪುತ್ತೂರು ಭೇಟಿ ಚುನಾವಣೆಯ ದೃಷ್ಟಿಕೋನದಿಂದ ಭಾರೀ ಮಹತ್ವ ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.