ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆ ಮೇ 12 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಸಾವಿರ ವರ್ಷಗಳ ಇತಿಹಾಸ ಇರುವ ಪುತ್ತೂರು ಸೀಮೆಗೊಳಪಟ್ಟ ಈ ತೊಟ್ಟಿಲಕಯಕ್ಕೆ ಸಾಕ್ಷಿ ಎಂಬಂತೆ ಶ್ರೀ ದಂಡನಾಯಕ ಉಳ್ಳಾಲ್ತಿಯ ನೇಮನಡಾವಳಿಯಲ್ಲಿ ದರ್ಶನ ಪಾತ್ರಿಯ ಮೂಲಕ “ನಾನು ತೊಟ್ಟಿಲಕಯದಿಂದ ಅವಿರ್ಭಸಿದ್ದೇನೆ” ಎಂಬ ಮಾತನ್ನು ಉಚ್ಚರಿಸುವುದು ೈತಿಹಾಸಿಕ ವಿಷಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮೂರು ತಿಂಗಳಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದೆ ಎಂದು ತಿಳಿಸಿದರು.
ಶ್ರೀ ಉಳ್ಳಾಲ್ತಿಯ ಮೂಲಸ್ಥಾನವಾದ ತೊಟ್ಟಿಲಕಯ ಕಾಲ ಕಳೆದಂತೆ ಶಿಶಿಲಗೊಂಡಿದೆ. ಬಳಿಕ ದೈವಜ್ಞರ ತಾಂಬೂಲಪ್ರಶ್ನೆಯಲ್ಲಿ ಜೀರ್ಣೋದ್ಧಾರ ಮಾಡಬೇಕೆಂಬ ಸೂಚನೆ ಕಂಡು ಬಂದ ಹಿನ್ನಲೆಯಲ್ಲಿ ಇದೀಗ ಜೀರ್ಣೋದ್ಧಾರಗೊಳಿಸಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರು ಹಾಗೂ ಜಗದ್ದಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅನುಗ್ರಹ ಪಡೆದುಕೊಂಡಿದ್ದು, ಮೇ 12 ರಂದು ಬೆಳಿಗ್ಗೆ ವೇ.ಮೂ. ಜಗದೀಶ ಭಟ್ ಭಟ್ರಪಾಡಿ ಅವರ ಗಂಟೆ 8.22 ರ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀ ಬಲ್ನಾಡು ಉಳ್ಳಾಲ್ತಿ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ, ಮಾಧವ ಗೌಡ ಕಾಂತಿಲ, ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ಬಾಲಕೃಷ್ಣ ರಾವ್ ಎಂ. ಉಪಸ್ಥಿತರಿದ್ದರು.