ಪುತ್ತೂರು: ಈಗಾಗಲೇ ಕಾಂಗ್ರೆಸ್ ತಿಳಿಸಿರುವಂತೆ ಅಧಿಕಾರಕ್ಕೆ ಬಂದರೆ ಬಜರಂಗದಳಕ್ಕೆ ನಿಷೇಧ ಹೇರುತ್ತಾರಂತೆ. ಗೋ ಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ತಡೆಯುವ ಅವಶ್ಯಕತೆ ಇದೆ. ಇದನ್ನು ತಡೆಯಲು ವ್ಯಕ್ತಿಯೋರ್ವನಿಂದ ಅಸಾಧ್ಯ. ಸಂಘಟನೆಯ ಶಕ್ತಿಯಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲೇಬೇಕು ಎಂದು ಭಜರಂಗದಳದ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು.
ಪಾಂಗಲಾಯಿಯ ಸಂತೋಷ್ ಬೋನಂತಾಯ ಅವರ ಮನೆಯಲ್ಲಿ ಭಾನುವಾರ ಸಂಜೆ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಿದೆ. ಆ ಮೂರುವರೆ ವರ್ಷದ ಆಡಳಿತ ಹಿಂದುತ್ವಕ್ಕೆ ಕೊಡುಗೆ ನೀಡುವ ದಿಶೆಯಲ್ಲೇ ಇತ್ತು ಎನ್ನುವುದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ಹಿಂದೂಪರವಾಗಿ ಬಿಜೆಪಿ ಸರಕಾರ ಮಾಡಿರುವ ಕೆಲಸಗಳನ್ನು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಾಪಾಸ್ ಮಾಡುವುದಾಗಿ ಬೆದರಿಕೆ ಹಾಕಿವೆ. ಆದ್ದರಿಂದ ಕಾಂಗ್ರೆಸನ್ನು ಎದುರಿಸಲು ಸಂಘಟನಾತ್ಮಕವಾಗಿ ಹೋರಾಟ ನಡೆಸುವ ಅಗತ್ಯವಿದೆ. ಇಲ್ಲದೇ ಇದ್ದರೆ, ನಮ್ಮ ಕೈಯ್ಯಾರೆ ನಾವೇ ಹಿಂದೂ ವಿರೋಧಿ ಸರಕಾರವನ್ನು ಅಸ್ತಿತ್ವಕ್ಕೆ ತಂದಂತಾಗುತ್ತದೆ. ಇದಕ್ಕೆ ಅವಕಾಶ ನೀಡದಿರೋಣ ಎಂದು ಕರೆ ನೀಡಿದರು.
ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ಸರಕಾರ ಹೇಳಿದೆ ಎಂದರೆ, ಕಾಂಗ್ರೆಸ್ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾರನ್ನೋ ಓಲೈಸಲಿಕ್ಕಾಗಿ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ. ಇದನ್ನು ನಾವೆಲ್ಲಾ ಜೊತೆಯಾಗಿ ವಿರೋಧಿಸಲೇಬೇಕು. ಕೇಂದ್ರದಲ್ಲಿ ಮೋದಿ ಸರಕಾರ ಇರುವುದರಿಂದ, ರಾಜ್ಯದಲ್ಲೂ ಬಿಜೆಪಿ ಸರಕಾರ ಇದ್ದಾರೆ ಮಾತ್ರ, ನಮ್ಮ ಹೋರಾಟಕ್ಕೆ ಬಲ ಬರುತ್ತದೆ. ನಮ್ಮ ಧ್ವನಿಯನ್ನು ಆಡಳಿತ ಅರ್ಥ ಮಾಡಿಕೊಳ್ಳುತ್ತದೆ. ಮಾತ್ರವಲ್ಲ, ಸೂಕ್ತ ನ್ಯಾಯವನ್ನು ದೊರಕಿಸಿಕೊಡುತ್ತದೆ. ಹಾಗಾಗಿ ಪುತ್ತೂರಿನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಡಬಲ್ ಇಂಜಿನ್ ಸರಕಾರ:
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶ ಮಾತ್ರವಲ್ಲ ವಿದೇಶದಲ್ಲೂ ಭಾರತದ ಹೆಸರನ್ನು ಚಿರಸ್ಥಾಯಿಯಾಗುವಂತಹ ಕೆಲಸ ನಿರ್ವಹಿಸಿದ್ದಾರೆ. ಹಾಗಾಗಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಬಲ ತುಂಬುವತ್ತ ನಾವು ಗಮನ ಕೊಡಬೇಕು. ಅದಕ್ಕಾಗಿ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು ಎಂದರು.
ಬಿಜೆಪಿ ಸರಕಾರದಿಂದ ಮೋದಿಗೆ ಬಲ: ಆಶಾ ತಿಮ್ಮಪ್ಪ
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ಮೂರುವರೆ ವರ್ಷದಲ್ಲಿ ರಾಜ್ಯದಲ್ಲೂ ಬಿಜೆಪಿ ಸರಕಾರವೂ ಉತ್ತಮ ಆಡಳಿತ ನೀಡಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಉತ್ತಮ ಕೆಲಸ ನಿರ್ವಹಿಸಬೇಕಾದರೆ, ಅವರಿಗೆ ಸೂಕ್ತ ಬೆಂಬಲವನ್ನು ನಾವುಗಳು ನೀಡಬೇಕಾಗಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮೋದಿಗೆ ಕೈಯಂತೆ ಕೆಲಸ ಮಾಡುತ್ತಿದೆ. ಇದು ನಾವು ಹೆಮ್ಮೆ ಪಡಬೇಕಾದ ಸಂಗತಿ. ಇಂತಹ ಕೈಯನ್ನು ತಟಸ್ಥರಾಗುವಂತೆ ಮಾಡಬಾರದು. ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು. ಈ ಹುದ್ದೆ ತನಗೆ ಸಿಗುತ್ತದೆ ಎಂದು ತಾನು ಭಾವಿಸಿಯೇ ಇರಲಿಲ್ಲ. ಆದರೆ ಅನಿರೀಕ್ಷಿತವಾಗಿ ಬಿಜೆಪಿ ಹೈಕಮಾಂಡ್ ತನಗೆ ಈ ಅವಕಾಶ ನೀಡಿದೆ. ಪಕ್ಷದ ಪ್ರತಿಯೋರ್ವ ಕಾರ್ಯಕರ್ತನನ್ನು ಬಿಜೆಪಿ ಗುರುತಿಸುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಪಕ್ಷ ನೀಡಿದ ಜವಾಬ್ದಾರಿಯನ್ನು ಖಂಡಿತವಾಗಿಯೂ ಸಮರ್ಥವಾಗಿ ನಿಭಾಯಿಸುತ್ತೇನೆ. ನೀವು ನನ್ನ ಮೇಲಿಟ್ಟ ನಂಬಿಕೆಯನ್ನು ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪಾಂಗಲಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನದ ಅಧ್ಯಕ್ಷ ತಾರಾನಾಥ ರೈ, ರಾಜ್ ಗೋಪಾಲ್ ಶಗ್ರಿತ್ತಾಯ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.