ಪುತ್ತೂರು: ಅಸಂಖ್ಯಾತ ಕಾರ್ಯಕರ್ತರ ಘೋಷಣೆಗಳ ನಡುವೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ರೋಡ್ ಶೋಗೆ ಚಾಲನೆ ನೀಡಲಾಯಿತು. ವಿಜಯಪಥ ಬಿಜೆಪಿ ಪಕ್ಷದ ವಾಹನದ ಮುಂಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರೊಂದಿಗೆ ನಿಂತ ಯೋಗಿ ಆದಿತ್ಯನಾಥ್ ಅವರು ಕಾರ್ಯಕರ್ತರಿಗೆ ಕೈಬೀಸಿದರು. ಪೋಸ್ಟ್ ಆಫೀಸ್ ಕಚೇರಿಯ ಬಳಿಯಿಂದ ಶ್ರೀಧರ್ ಭಟ್ ಮಳಿಗೆಯಾಗಿ ಕಿಲ್ಲೆ ಮೈದಾನದ ರಸ್ತೆಯುದ್ಧಕ್ಕೂ ಪೊಲೀಸ್ ಬಿಗುಬಂದೋಬಸ್ತ್ ಹಾಕಲಾಗಿತ್ತು. ಇದರ ನಡುವೆ ಅಂಗಡಿ, ಮಳಿಗೆಗಳ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಕೈಬೀಸಿ, ತಮ್ಮ ನೆಚ್ಚಿನ ನಾಯಕನಿಗೆ ಗೌರವ ತೋರಿದರು.
ವಿಜಯಪಥ ವಾಹನದಲ್ಲಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಇದ್ದರು. ಕಿಲ್ಲೆ ಮೈದಾನಕ್ಕೆ ತಲುಪಿದ ಬಳಿಕ ವಿಜಯಪಥ ರಥದಲ್ಲೇ ನಿಂತು ಯೋಗಿ ಆದಿತ್ಯನಾಥ್ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.