ಪುತ್ತೂರು: ‘ಪುತ್ತೂರಿನ ಮುತ್ತಿನಂತಹ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ, ಬುಲ್ಡೋಜರ್ ಬಾಬಾ ಖ್ಯಾತಿಯ ಯೋಗಿ ಆದಿತ್ಯನಾಥ್ ಅವರು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು ಗೆಲ್ಲಿಸಿಕೊಡಿರೆಂದು ಮನವಿ ಮಾಡಿಕೊಂಡರು. ಕರ್ನಾಟಕ ವಿಕಾಸಕ್ಕಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ಈ ಚುನಾವಣೆ ನಡೆಯುತ್ತಿದ್ದು, ಪಕ್ಷ – ಸಿದ್ಧಾಂತ ನಂಬಿಕೊಂಡ ಓರ್ವ ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಅವರನ್ನು ವಿಧಾನಸಭೆ ಕಳುಹಿಸಿಕೊಡಿರೆಂದು ಪುತ್ತೂರಿನ ಮತದಾರರಲ್ಲಿ ಕೇಳಿಕೊಂಡರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಳಿಕ ಬೃಹತ್ ರೋಡ್ ಶೋ ನಡೆಸಿಕೊಟ್ಟರು. ಪುತ್ತೂರು ಕಿಲ್ಲೆ ಮೈದಾನದಲ್ಲಿ ರೋಡ್ ಶೋ ಸಮಾಪನಗೊಂಡು, ಬಳಿಕ ನೆರೆದ ಸಾವಿರಾರು ಸಂಖ್ಯೆಯ ಸಾರ್ವಜನಿಕರನ್ನು, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪುತ್ತೂರಿನ ಪುಣ್ಯದ ಮಣ್ಣಿನಲ್ಲಿ, ಪರಶುರಾಮ ಸೃಷ್ಟಿಯ ತುಳುನಾಡಿಗೆ ಮೊದಲಾಗಿ ವಂದನೆ ಸಲ್ಲಿಸುತ್ತೇನೆ ಎಂದು ಮಾತಿಗೆ ಅಡಿಯಿಟ್ಟ ಯೋಗಿ, ಅಯೋಧ್ಯೆಯ ಪುಣ್ಯದ ಭೂಮಿಯಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಉತ್ತರಪ್ರದೇಶದಲ್ಲಿರುವ ಅಯೋಧ್ಯೆಗೂ ಕರ್ನಾಟಕಕ್ಕೂ ಬಹಳ ಪ್ರಾಚೀನ ಕಾಲದಿಂದಲೂ ನಿಕಟ ಸಂಬಂಧವಿದೆ. ಮಾನವ ಸಭ್ಯತೆಯ ಇತಿಹಾಸವಿದೆ ಎಂದು ಸ್ಮರಿಸಿಕೊಂಡರು.
ಹಲವಾರು ವರ್ಷಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ ರಾಮನಿಗೆ ಹನುಮಂತ ಸಿಕ್ಕಿದ ಎಂಬ ಉಲ್ಲೇಖ ಸಿಗುತ್ತವೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಆಗುತ್ತಿದೆ. ಶ್ರೀ ರಾಮ ಭಕ್ತ ಹನುಮಂತನ ಹುಟ್ಟೂರು ಕರ್ನಾಟಕವೇ ಆಗಿರುವುದರಿಂದ, ಈ ಎರಡು ರಾಜ್ಯಗಳು ಪರಸ್ಪರ ಸಂಬಂಧವನ್ನು ಹೊಂದಿದೆ. ಆದರೆ ಕಾಂಗ್ರೆಸ್, ರಾಮನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದೆ. ಇನ್ನೂ ಮುಂದೆ ಹೋಗಿ, ಭಜರಂಗದಳ ಸಂಘಟನೆಯನ್ನೇ ನಿಷೇಧಿಸುತ್ತೇವೆ ಎಂದು ಹೇಳುತ್ತಿದೆ. ರಾಷ್ಟ್ರದ್ರೋಹಿಗಳಿಗೆ ಇದು ಬೆಂಬಲ ಸೂಚಿಸುವಂತಹ ಕ್ರಮವಾಗಿದೆ. ಇದನ್ನು ಜನರು ಖಂಡಿತವಾಗಿಯೂ ಸ್ವೀಕರಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸನ್ನು ಜನರು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಭವಿಷ್ಯ ನುಡಿದರು.
ಭಜರಂಗದಳ ಸಾಂಸ್ಕೃತಿಕ, ಧಾರ್ಮಿಕ ಸಂಘಟನೆ. ಭಾರತದ ಸನಾತನ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಘಟನೆ. ಪ್ರಧಾನಿ ಮೋದಿಯ ಆಡಳಿತದಲ್ಲಿ ದೇಶ ಸುಭಿಕ್ಷ, ಸುರಕ್ಷಿತವಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, ವಿಶ್ವದಲ್ಲಿ ಹೆಸರುವಾಸಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಪರಿಚಯಿಸಿರುವ ಯೋಜನೆಗಳು ಪ್ರತಿ ಮನೆಗೆ, ಪ್ರತಿ ರೈತರಿಗೆ, ಪ್ರತಿ ಮಹಿಳೆಯರಿಗೆ, ಪ್ರತಿ ಯುವಕರಿಗೆ ಸಿಗುವಂತಾಗಬೇಕು. ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರಕಾರ ಅಸ್ತಿತ್ವಕ್ಕೆ ಬರಬೇಕು ಎಂದು ಕರೆ ನೀಡಿದರು.
ಡಬಲ್ ಇಂಜಿನ್ ಸರಕಾರ ಇಂದಿನ ಅವಶ್ಯಕ. ಆದ್ದರಿಂದ ಈ ಬಾರಿಯ ಚುನಾವಣೆಯೂ ಕರ್ನಾಟಕ ವಿಕಾಸಕ್ಕಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ನಡೆಯುತ್ತಿದೆ. ಹಾಗಾಗಿ ಪುತ್ತೂರಿನಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕಾಗಿದೆ. ಆಶಾ ತಿಮ್ಮಪ್ಪ ಅವರನ್ನು ವಿಧಾನಸಭೆಗೆ ಕಳುಹಿಸಿಕೊಡಬೇಕು ಎಂದು ಕೇಳಿಕೊಂಡರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಎಲ್ಲರನ್ನು ಸ್ವಾಗತಿಸಿ, ಮಾತನಾಡಿ, ಪ್ರವೀಣ್ ನೆಟ್ಟಾರು ಅವರಂತಹ ಅನೇಕ ಧೀಮಂತ ನಾಯಕರ ಪರಿಶ್ರಮ, ಪಿ.ಎಫ್.ಐ. ನಿಷೇಧ ಮಾಡಿರುವಂತಹ ಬಿಜೆಪಿಯ ಕ್ರಮಗಳಿಂದಾಗಿ ಈ ಬಾರಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಘೋಷಿಸಿರುವ ಕಾಂಗ್ರೆಸ್, ಅವಸಾನದತ್ತ ಸಾಗಲಿದೆ. ಬಿಜೆಪಿ ವಿಜಯದತ್ತ ಸಾಗುತ್ತಿದ್ದು, ಪುತ್ತೂರಿನ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗೆಲ್ಲಲಿದ್ದಾರೆ. ಭಯೋತ್ಪಾದಕರ ಹುಟ್ಟಡಗಿಸಿದ ಯೋಗಿ ಆದಿತ್ಯನಾಥ್ ಅವರು ನಿಮ್ಮ ಆಶೀರ್ವಾದ ಪಡೆಯಲು ನಿಮ್ಮ ಮುಂದೆ ಬಂದಿದ್ದಾರೆ ಎಂದರು.
ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಬೇಕು. ಆದ್ದರಿಂದ ನಿಮ್ಮ ಆಶೀರ್ವಾದ ಪಡೆಯಲು ನಿಮ್ಮ ಮುಂದೆ ಬಂದಿದ್ದೇನೆ ಎಂದರು.
ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ವಂದಿಸಿದರು.