ಪುತ್ತೂರು: ಭಾರತೀಯ ಜನತಾ ಪಾರ್ಟಿಯಲ್ಲಿ ನಿಷ್ಟಾವಂತರಿಗೆ ಪ್ರಾತಿನಿಧ್ಯ ಇಲ್ಲ. ಬದಲಾಗಿ ವಾಹನ ಚಲಾಯಿಸಿದಂತೆ ಬ್ರೇಕ್, ಕ್ಲಚ್ ಯಾರದೋ ಕೈಯಲ್ಲಿ ಎಂಬಂತಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಹೇಳಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವ್ಯವಸ್ಥೆಯಲ್ಲಿ ಒಟ್ಟಾರೆಯಾಗಿ ತಳಮಟ್ಟದಿಂದಲೇ ನೀತಿ, ನಿಯಮಗಳಿಗೆ ಬದ್ಧತೆಯಿಂದ ಹಿಂದೆ ಪಕ್ಷವನ್ನು ಕಟ್ಟಿ ಬೆಳೆಸಿದ್ದರೂ ಪ್ರಸ್ತುತ ಇಲ್ಲ. ತೆರೆಮರೆಯಲ್ಲಿ ಕುಳಿತು ತನ್ನದೇ ವೈಯಕ್ತಿಕ, ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡವರಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಪಕ್ಷದಲ್ಲಿ ಸಮರ್ಥ ನಾಯಕ ಎನಿಸಿದವರಿಗೆ, ದುಡಿದ ನಿಷ್ಠಾವಂತ ಕಾರ್ಯಕರ್ತನಿಗೆ ಸಮಾಜಕ್ಕಾಗಿ ದುಡಿದವನಿಗೆ ಬೆಲೆ ಕೊಡದ ಯಾರಿಗೋ ಸ್ಥಾನಮಾನ ನೀಡುವ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಪಕ್ಷದಲ್ಲಿ ಪ್ರತಿಯೊಂದು ಜವಾಬ್ದಾರಿಗಳನ್ನು ಕಲ್ಲಡ್ಕ ಪ್ರಭಾಕರ್ ಭಟ್ಟ ತೀರ್ಮಾನದಂತೆ ನೇಮಕಾತಿ ಮೂಲಕ ಆಗುತ್ತಿದ್ದು,. ಇಡೀ ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಕಾಂಗ್ರೆಸ್ ಗೆ ಬೇಕಾದರೂ ಮತ ನೀಡಿ, ಅರುಣ್ ಕುಮಾರ್ ಪುತ್ತಿಲರಿಗೆ ನೀಡಬೇಡಿ ಎಂದು ಬಹಿರಂಗವಾಗಿ ಹೇಳಿರುವುದು ಖೇದಕರ ಎಂದರು.
ಡಿ.ವಿ.ಸದಾನಂದ ಗೌಡರು ಹಲವು ಜವಾಬ್ದಾರಿಗಳನ್ನು ಹೊತ್ತುಕೊಂಡವರು. ಅವರನ್ನು ಪುತ್ತೂರಿನಲ್ಲಿ ಎಂಎಲ್‍ಎ ಆಗಿ ಗುರುತಿಸಿಕೊಳ್ಳಲು ಕಾರಣರಾದವರಲ್ಲಿ ನಾನು ಒಬ್ಬ. ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡಿರುವ ಡಿ.ವಿ.ಸದಾನಂದರಿಗೆ ಕೊನೆಗೆ ಎತ್ತಿಹೊಳೆ ವ್ಯವಹಾರ ಮಾಡುವ ಪರಿಸ್ಥಿತಿ ಉಂಟಾಯಿತು ಎಂದು ಲೇವಡಿ ಮಾಡಿದ ಅವರು, ಈ ಬಾರಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರನ್ನು ಗೆಲ್ಲಿಸಿಕೊಡಬೇಕೆಂದು ಮತದಾರರಲ್ಲಿ ವಿನಂತಿ ಮಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಎಲ್ಲದರಲ್ಲೂ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ತಳಮಟ್ಟಕ್ಕೆ ಹೋಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ ಕುಮಾರ್ ಸೊರಕೆ, ನಿವೃತ್ತ ಪ್ರಾಂಶುಪಾಲ ಉದಯ ಶಂಕರ್ ಉಪಸ್ಥಿತರಿದ್ದರು.