ಪುತ್ತೂರು: ಬಡವರ ಸೇವೆ ಮಾಡಬೇಕು, ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸಬೇಕು, ನೊಂದವರಿಗೆ ಸಾಂತ್ವನ ಹೇಳಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮತ್ತು ಪುತ್ತೂರು ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯ ಕೊಡಿಸುವೆ ನನ್ನನ್ನು ಗೆಲ್ಲಿಸಿಕೊಡಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮನವಿ ಮಾಡಿದರು.
ಈಶ್ವರಮಂಗಲದಿಂದ ಗಾಳಿಮುಖ ತನಕ ನಡೆದ ಬೃಹತ್ ರೋಡ್‌ಶೋ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಅಶೋಕ್ ರೈಗೆ ಹಣ ಮಾಡಬೇಕೆಂಬ ಆಸೆಯೇ ಇಲ್ಲ, ನನಗೆ ದೇವರು ಕೊಟ್ಟಿದ್ದಾನೆ, ಅದರಲ್ಲೂ ಒಂದು ಪಾಲು ಬಡವರಿಗೆ ಕೊಡುತ್ತಿದ್ದೇನೆ. ಇನ್ನಷ್ಟು ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಕ್ಷೇತ್ರದಾದ್ಯಂತ ಸುತ್ತಡಿದ್ದೇನೆ, ಮತ ಯಾಚನೆ ಮಾಡಿದ್ದೇನೆ , ಕಾಂಗ್ರೆಸ್ಸನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದೇನೆ ನೀವು ಹಾಕಿದ ವೋಟು ಒಂದೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ನನ್ನನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಯುವಕರೇ ಮುಂದೆ ಬನ್ನಿ ಕೈಬಿಡಲಾರೆ : ಅಶೋಕ್ ಕುಮಾರ್ ರೈ
ಯುವ ಸಮೂಹಕ್ಕೆ ವಿದ್ಯೆ ಇದ್ದರೂ ಉದ್ಯೋಗ ಇಲ್ಲ. ತಾನು ಖರ್ಚು ಮಾಡಿ ಕಲಿತದ್ದು ವೇಸ್ಟ್ ಎಂಬ ಭಾವನೆ ಅವರಲ್ಲಿದೆ ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವೊಬ್ಬ ವಿದ್ಯಾವಂತ ಯುವಕರು ನಿರಾಶರಾಗಬೇಕೆಂದಿಲ್ಲ. ಪುತ್ತೂರಿನ ವಿದ್ಯಾವಂತ ವಿರುದ್ಯೋಗಿ ಯುಕವರಿಗೆ ಉದ್ಯೋಗ ಸೃಷ್ಟಿಸುವ ಉದ್ಯಮವನ್ನು ಆರಂಭ ಮಾಡುವೆ. ಗ್ರಾಮೀಣ ಭಾಗದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರೂ ಉದ್ಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳುವೆ. ಯುವ ಸಮೂಹ ದಾರಿ ತಪ್ಪಬಾರದು. ಯಾರದೋ ಮಾತುಕೇಳಿ ನಿಮ್ಮ ಯುವತ್ವವನ್ನು ಹಾಳುಮಾಡಬೇಡಿ. ಸಾಕಿ ಸಲಹಿದ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ಗಳಿಸಿಕೊಡುವ ಮಕ್ಕಳು ನಾವಾಗಬೇಕು. ಅಶೋಕ್ ರೈ ಕೊಟ್ಟ ಮಾತಿಗೆ ಎಂದೂ ತಪ್ಪಲಾರ, ನನ್ನನ್ನು ಗೆಲ್ಲಿಸಿ ನಿಮ್ಮನ್ನೆಂದೂ ಕೈಬಿಡಲಾರೆ ಎಂದು ಹೇಳಿದರು.
ಕೃಷಿಕರಿಗೆ ಕರೆಂಟ್ ಫ್ರೀ ಕೊಟ್ಟದ್ದು ಕಾಂಗ್ರೆಸ್; ಕಾವು ಹೇಮನಾಥ ಶೆಟ್ಟಿ
ಇಂದು ನಾವು ಅಡಿಕೆ ಬೆಳೆಯುತ್ತಿದ್ದೇವೆ. ನಮ್ಮ ತಓಟಕ್ಕೆ ನೀರು ಹಾಕಲು ದಿನದ 24 ಗಂಟೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಉಚಿತ ವಿದ್ಯುತ್ ಕಾಂಗ್ರೆಸ್ ಸರಕಾರದ ಯೋಜನೆಯಾಗಿದೆ. ಕಳೆದ 30 ವರ್ಷಗಳಿಂದ ನಾವು ನೀವೆಲ್ಲರೂ ಕರೆಂಟ್ ಬಿಲ್ ಕಟ್ಟದೆ ತೋಟಕ್ಕೆ ನೀರು ಹಾಕುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಪ್ರತೀಯೊಬ್ಬ ಕೃಷಿಕರೂ ಈ ಯೋಜನೆಯ ಮೂಲವನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, ಪುತ್ತೂರು ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್‌ಗೆ ಹೋದಕಡೆಯೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಅಶೋಕ್ ರೈಯವರನ್ನು ಗೆಲ್ಲಿಸಿ; ಎಂ ಬಿ ವಿಶ್ವನಾಥ ರೈ
ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ, ಈ ಬರಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ಜನ ಸಂಕಲ್ಪ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕರ ಜನತೆಗೆ ದ್ರೋಹ ಮಾಡಿದೆ. ಅಚ್ಚೇದಿನ್ ಕೊಡುವುದಾಗಿ ಹೇಳಿ ಬೆಲೆ ಏರಿಕೆ ಮೂಲಕ ಜನರ ದುಡ್ಡನ್ನು ಕೊಳ್ಳೆ ಹೊಡೆಯುತ್ತಿದೆ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಬಡವರ ಪರ ಯೋಜನೆಯನ್ನು ಕೈ ಬಿಟ್ಟಿದೆ. ಕಾಂಗ್ರೆಸ್ ನಿಂದ ಮಾತ್ರ ಜನಪರ , ಬಡವರ ಪರ ಸರಕಾರ ನೀಡಲು ಸಾಧ್ಯ ಎಂದರು.
ಈಶ್ವರಮಂಗಲ ಪೇಟೆಯಿಂದ ಕಾಲ್ನಡಿಗೆ ಮೂಲಕ ರೋಡ್‌ಶೋ ನಡೆಸಿದ ಅಶೋಕ್ ರೈಯವರು ಈಶ್ವರಮಂಗಲ ಪೇಟೆಯಲ್ಲಿ ಮತಯಾಚನೆ ನಡೆಸಿದರು. ಆ ಬಳಿಕ ವಹನದ ಮೂಲಕ ತೆರಳಿ ಮೇನಾಲ , ಪಳ್ಳತ್ತೂರಿನಲ್ಲಿ ರೋಡ್‌ಶೋ ನಡೆಸಿದರು. ಬಳಿಕ ಗಡಿಪ್ರದೇಶವಾದ ಗಾಳಿಮುಖದಲ್ಲಿ ಕಾಲ್ನಡಿಗೆ ಮೂಲಕ ರೋಡ್‌ಶೋ ನಡೆಸಿದ ಅಶೋಕ್ ರೈಯವರು ಗಾಳಿಮುಖ ಪಟ್ಟಣದಲ್ಲಿ ಅಂಗಡಿಗಳಿಗೆ ತೆರಳಿ ಮತಯಾಚನೆ ನಡೆಸಿದರು ಕಾರ್ಯಕ್ರಮದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಮುರಳೀದರ್ ರೈ ಮಠಂತಬೆಟ್ಟು, ಶ್ರೀರಾಂ ಪಕ್ಕಳ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮಹಮ್ಮದ್ ಬಡಗನ್ನೂರು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ತಿತರಿದ್ದರು.