ಸುಳ್ಯ ಕ್ಷೇತ್ರ ಗೆದ್ದು ಖರ್ಗೆಗೆ ಉಡುಗೊರೆ; ಎಐಸಿಸಿ ಸದಸ್ಯ ಸುನಿಲ್ ಕೇದಾರ್

ಕಡಬ: ಹಲವು ವರ್ಷಗಳಿದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಬಾರಿ ಕೊರತೆಯನ್ನು ಕ್ಷೇತ್ರದ ಮತದಾರರು ನೀಗಿಸುತ್ತಾರೆ. ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲಗಳು ನಿವಾರಣೆಯಾಗಿದ್ದು, ಕಾಂಗ್ರೆಸ್ ಗೆಲುವು ನಿಶ್ಚಿತ, ಇಲ್ಲಿ ಗೆಲುವು ದಾಖಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಕರ್ನಾಟಕದ ಮೇರು ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾರ್ಯಕರ್ತರು ಹಾಗೂ ಮತದಾರರು ಉಡುಗೊರೆ ನೀಡಲಿದ್ದಾರೆ ಎಂದು ಎಐಸಿಸಿ ಸದಸ್ಯ ಮಹಾರಾಷ್ಟ್ರ ಮಾಜಿ ಸಚಿವ, ಸುಳ್ಯ ವಿಧಾನಸಭಾ ಕಾಂಗ್ರೆಸ್ ವೀಕ್ಷಕ ಸುನಿಲ್ ಕೇದಾರ್ ಹೇಳಿದರು. ಅವರು ಕಡಬದಲ್ಲಿ ಮಂಗಳವಾರ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ ಹಾಗೂ ಟಿಕೇಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರ ನಡುವಿನ ಮನಸ್ತಾಪವನ್ನು ಶಮನಗೊಳಿಸಿದ ಬಳಿಕ ಇಬ್ಬರನ್ನೂ ಒಟ್ಟಿಗೆ ಕೂರಿಸಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲವನ್ನು ಬಗೆಹರಿಸಲಾಗಿದೆ. ಎಲ್ಲಾ ಮನಸ್ತಾಪಗಳು ಶಮನಗೊಂಡಿದ್ದು, ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಜೊತೆಯಾಗಿದ್ದು, ಬಾರಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಧಿಕ ಮತಗಳಿಂದ ಗೆಲವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರ ವಹಿಸಿಕೊಳ್ಳಲಿದೆ. ಕರ್ನಾಟಕ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಬಲ ತಂದುಕೊಟ್ಟಿದೆ. ಹಲವು ವರ್ಷಗಳ ಬಳಿಕ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸುಳ್ಯದ ಮತದಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆಯವರಿಗೆ ಗೆಲುವಿನ ಉಡುಗೊರೆ ನೀಡಲಿದ್ದಾರೆ. ಅದಕ್ಕಾಗಿ ನಾಯಕರು ಹಾಗೂ ಕಾರ್ಯಕರ್ತರು ಎಲ್ಲಾ ಭಿನ್ನಮತ ಮರೆತು ಸುಳ್ಯ ಕ್ಷೇತ್ರದಾದ್ಯಂತ ಮತಯಾಚನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ. ಅವರು ಮಾತನಾಡಿ, ಸುಳ್ಯ ಕಾಂಗ್ರೆಸ್‌ನಲ್ಲಿದ್ದ ಸಣ್ಣಪುಟ್ಟ ಗೊಂದಲಗಳನ್ನು ಪಕ್ಷದ ನಾಯಕರು ಸರಿಪಡಿಸಿದ್ದಾರೆ. ನಾನು ಯುವ ಕಾಂಗ್ರೆಸ್‌ನಿಂದಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ವರಿಷ್ಠರು ನನ್ನನ್ನು ಅಭ್ಯರ್ಥಿಯನ್ನಾಗಿ ಆರಿಸಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ, ಜನ ವಿರೋಧಿ ಆಡಳಿತ ನೀತಿಗಳಿಂದಾಗಿ ರೋಸಿ ಹೋಗಿರುವ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಸುಳ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದೆ ಎಂದರು. ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರು ಮಾತನಾಡಿ, ನಾನು ಕಳೆದ ಹಲವು ವರ್ಷಗಳಿಂದ ಸುಳ್ಯ ಕ್ಷೇತ್ರದಾದ್ಯಂತ ಓಡಾಟ ನಡೆಸಿ ಜನರ ಒಲವನ್ನು ಗಳಿಸಿದ್ದೆ. ಕಾರ್ಯಕರ್ತರು ಹಾಗೂ ಜನರ ಒತ್ತಾಸೆಯಂತೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಕೊನೆಯ ಘಳಿಗೆಯಲ್ಲಿ ಟಿಕೆಟ್ ಕೃಷ್ಣಪ್ಪ ಅವರ ಪಾಲಾಗಿದೆ. ಆ ಸಮಯದಲ್ಲಿ ನನಗೆ ಹಾಗೂ ನನ್ನ ಪರವಾಗಿದ್ದ ದೊಡ್ಡ ಸಂಖ್ಯೆಯ ಕಾರ್ಯಕರ್ತರಿಗೆ ಮನಸ್ಸಿಗೆ ನೋವಾಗಿದ್ದು ನಿಜ. ಇದೀಗ ಪಕ್ಷದ ಉನ್ನತ ನಾಯಕರು ನಮ್ಮ ಜೊತೆ ಮಾತುಕತೆ ನಡೆಸಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವಂತೆ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಕಡಬದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದೇವೆ. ನಾವು ಎಲ್ಲಾ ವೈಮನಸ್ಸುಗಳನ್ನು ತೊರೆದು ಸುಳ್ಯದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಗೌಡ ಬಳ್ಳೇರಿ, ವಿಜಯ ಕುಮಾರ್ ರೈ ಕರ್ಮಾಯಿ, ರೋಯಿ ಅಬ್ರಹಾಂ, ಪ್ರವೀಣ್‌ ಕುಮಾರ್ ಕೆಡೆಂಜಿಗುತ್ತು, ಗೋಕುಲ್‌ದಾಸ್ ಸುಳ್ಯ, ಸೈಮನ್ ಸಿ.ಜೆ. ಕಡಬ, ಸತೀಶ್ ನಾಯಕ್ ಮೇಲಿನಮನೆ, ಭವಾನಿಶಂಕರ್ ಕಲ್ಮಡ್ಕ, ಸತೀಶ್ ಶೆಟ್ಟಿ ಬೀರುಕ್ಕು, ಫೈಝಲ್ ಕಡಬ, ಕೆ.ಎಂ. ಹನೀಫ್, ಅಶ್ರಫ್ ಶೇಡಿಗುಂಡಿ, ರಾಮಕೃಷ್ಣ ಹೊಳ್ಳಾರ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top