ಮದ್ಯ ಮುಕ್ತ, ಆಮಿಷ ಮುಕ್ತ ಚುನಾವಣೆಗೆ ಜನಜಾಗೃತಿ ವೇದಿಕೆ ಆಗ್ರಹ | ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ

ಪುತ್ತೂರು: ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮದ್ಯ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕು. ಪ್ರಜ್ಞಾವಂತ ನಾಗರಿಕರು ಮದ್ಯಪಾನದ ಮತ್ತು ಇತರ ಯಾವುದೇ ಆಮಿಷಕ್ಕೆ ಬಲಿಯಾಗಬಾರದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಭಾರತೀಯ ರಾಜಕೀಯ ವ್ಯವಸ್ಥೆಯ ನೈತಿಕ ಅಧಃಪತನವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನಾದಿ ದುಶ್ಚಟಗಳ ವ್ಯಾಪಕತೆಗೆ ಕಾರಣವಾಗಿದೆ. ಹೆಂಡ ಹಂಚದೆ, ಆಮಿಷಗಳಿಲ್ಲದೆ ಚುನಾವಣೆಯೇ ಇಲ್ಲ ಎಂಬಂತಹ ದುಸ್ಥಿತಿ ಉಂಟಾಗಿದೆ. ಅಧಿಕಾರ ವಿಕೇಂದ್ರೀಕರಣ ಮಾದರಿ, ವ್ಯವಸ್ಥೆ ಆಗಬೇಕಿದ್ದ ಗ್ರಾಮೀಣರ ಬದುಕಿನಲ್ಲಿ ಆಶಾಭಾವನೆ ತುಂಬಬೇಕಿದ್ದ ಚುನಾವಣೆಗಳು ಮದ್ಯ ಹಂಚುವ ಸಂದರ್ಭಗಳಾಗಿದೆ. ಇದರಿಂದ ಸಮಾಜವನ್ನು ತಪ್ಪು ದಾರಿಗೆ ಎಳೆಯುವಂತಾಗಿದೆ ಎಂದರು.

ಚುನಾವಣೆಯ ಸಂದರ್ಭಗಳಲ್ಲಿ ಅದೆಷ್ಟೋ ಹೊಸ ಕುಡುಕರು ಸೃಷ್ಟಿಯಾಗುತ್ತಾರೆ. ಮದ್ಯಪಾನದ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಕೇವಲ ಹೆಂಡಕ್ಕಾಗಿ ನಮ್ಮ ಹಕ್ಕನ್ನು ನಾವು ಮಾರಿಕೊಂಡಂತೆ. ಮತದಾರರಿಗೆ ಹೆಂಡದ ಆಮಿಷವೊಡ್ಡಿ ಮತ ಪಡೆಯುವ ಪ್ರಯತ್ನ. ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಚುನಾವಣಾ ಅಧಿಕಾರಿಗಳಿಗೆ ತಹಶೀಲ್ದಾರರಿಗೆ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡುವುದು ತಮ್ಮ ಕರ್ತವ್ಯವಾಗಿದೆ. ಇಂತಹ ಪ್ರಯತ್ನಗಳು ನಡೆದಲ್ಲಿ, ಪಕ್ಷ, ಧರ್ಮ, ಜಾತಿ ಭೇಧ ಮರೆತು ಸಾಮೂಹಿಕವಾಗಿ ವಿರೋಧಿಸುವ ಅನಿವಾರ್ಯತೆಯಿದೆ. ಹೀಗೆ ಸದೃಢ, ಪಾರದರ್ಶಕ ಆಡಳಿತವನ್ನು ರೂಪಿಸಲು ಪಕ್ಷಗಳು, ಅಭ್ಯರ್ಥಿಗಳು, ಮತದಾರರು, ಸಂಘಸಂಸ್ಥೆಗಳು ಸಹಕರಿಸಬೇಕು. ಈ ನಿಟ್ಟಿನಲ್ಲಿ ಪಾನಮುಕ್ತರ ನವಜೀವನ ಸಮಿತಿಗಳನ್ನು ಕಾವಲು ಸಮಿತಿಯಂತೆ ಕೆಲಸ ನಿರ್ವಹಿಸಲು ತರಬೇತಿ ನೀಡಲಾಗಿದೆ. ನಗರಗಳಲ್ಲಿ ‘ಮದ್ಯಮುಕ್ತ ಮತದಾನ’ ಎಂಬ ಶೀರ್ಷಿಕೆಯಲ್ಲಿ ಬ್ಯಾನ‌ರ್ ಗಳನ್ನು ಅಳವಡಿಸಿ ಜಾಗೃತಿಯನ್ನು ಮೂಡಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ,



































 
 

ವಾರ್ಷಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಕೋಟಿ ಅನುದಾನ:

ಈ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿಗೆ ತಲಾ ರೂ.75 ಸಾವಿರದಂತೆ ರಾಜ್ಯದಲ್ಲಿ 2 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಸ್ಥಳೀಯ ಮದ್ಯವರ್ಜನ ಶಿಬಿರಗಳು ಜನರ ಭಾಗವಹಿಸುವಿಕೆಯಿಂದ ಮತ್ತು ಧನಸಹಾಯದಿಂದ ನಡೆಸಲ್ಪಡುತ್ತದೆ. ವಾರ್ಷಿಕವಾಗಿ 150 ಶಿಬಿರಗಳನ್ನು ಸಂಘಟಿಸಿ 10 ಸಾವಿರಕ್ಕೂ ಮಿಕ್ಕಿದ ವ್ಯಸನಿಗಳನ್ನು ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಸಮುದಾಯದ ಮೂಲಕ ವಾರ್ಷಿಕವಾಗಿ ರೂ.5 ಕೋಟಿಗೂ ಮಿಕ್ಕಿದ ಧನಸಹಾಯ ವಿನಿಯೋಗವಾಗುತ್ತಿದೆ. ಹೀಗೆ ವೇದಿಕೆಯ ಕಾರ್ಯಕ್ರಮಗಳು ಜನರ ಸಹಕಾರದಿಂದ. ಪಾಲ್ಗೊಳ್ಳುವಿಕೆಯಿಂದ ಆವರದ್ದೇ ನೆರವಿನಿಂದ ನಡೆಯುತ್ತಿದೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ 3 ವರ್ಷಗಳಿಂದ ಕರ್ನಾಟಕ ರಾಜ್ಯವಾದ್ಯಂತ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಕಾರ್ಯೋನ್ಮುಖವಾಗಿದೆ. ಈ ಸಂಘಟನೆಯ ಮೂಲಕ ಮುಖ್ಯವಾಗಿ ಮದ್ಯವರ್ಜನ ಶಿಬಿರ, ಜಾಗತಿ ಮತ್ತು ಪ್ರಚಾರ ಕಾರ್ಯಕ್ರಮಗಳು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ, ನವಜೀವನ ಸಮಿತಿ, ವ್ಯಸನಮುಕ್ತಿ ಮತ್ತು ಸಂಶೋಧನೆ ಕೇಂದ್ರ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ವನಭಾರತ, ಕುಟುಂಬಗಳಿಗೆ ನೆರವಾಗಿದೆ.

ಮದ್ಯಮುಕ್ತ ಸಮಾಜಕ್ಕಾಗಿ ಸಮುದಾಯ ಶಿಬಿರ:

ಬೇಡಿಕೆಯ ಮೂಲಕ ಇದುವರೆಗೆ 1648 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1,13,303 ಜನರಿಗೆ ವ್ಯಸನಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಸಮುದಾಯ ಶಿಬಿರಗಳಲ್ಲಿ ಪಾನಮುಕ್ತರಾದ ಕಾಟುಂಬಗಳು ಧನ್ಯತೆಯಿಂದ ಮತ್ತು ಸ್ವಾಭಿಮಾನದಿಂದ ಬದುಕುವುದನ್ನು ಕಾಣಲು ಸಾಧ್ಯವಾಗಿದೆ. ವ್ಯಸನಮುಕ್ತರಿಗೆ ನವಜೀವನ ಸಮಿತಿ: ವಸನದಿಂದ ಮುಕ್ತಿ ಪಡೆದವರು ಸಮಾಜದ ವಿವಿಧ ಸ್ಥರಗಳಲ್ಲಿ ಅತ್ಯುನ್ನತ ಸ್ಥಾನಮಾನಗಳಿಂದ ಬಮಕು ನಡೆಸುತ್ತಿದ್ದಾರೆ. ಶಿಬಿರದ ಬಳಕ ವ್ಯಸನಮುಕ್ತರ: ನವಜೀವನ ಸಮಿತಿಗಳನ್ನು ಸ್ಥಳೀಯವಾಗಿ ರಚಿಸಿ ಅನುಪಾಲನೆ ಮಾಡಲಾಗುತ್ತಿದೆ. ಇಂತಹ 4131 ನವಜೀವನ ಸಮಿತಿಗಳ ಮೂಲಕ ಪಾನಮುಕ್ತರು ಸಂಘಟಿತರಾಗುತ್ತಿದ್ದಾರೆ. ರಾಜ್ಯದಲ್ಲಿ 58 ಪಾನಮುಕ್ತ ಗ್ರಾಮಗಳಾಗಿ ಬದಲಾಗಿದೆ. ಪಾನಮುಕ್ತರನ್ನು ಸ್ವಸಹಾಯ ಸಂಘಗಳಿಗೆ ಪರಿಚಯಿಸಿ ಉಳಿತಾಯವನ್ನು ಮಾಡಲು ಪ್ರೇರೇಪಿಸಲಾಗುತ್ತಿದೆ. ಸ್ವ ಉದ್ಯೋಗ, ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರ ಬದುಕಿನಲ್ಲಿ ಹೊಸಬೆಳಕು ಮೂಡಲು ಯೋಜನೆ ಹಾಕಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ:

ಯುವಜನತೆಯನ್ನು ಆಕರ್ಷಿಸುತ್ತಿರುವ ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ನಿರಂತರ ಕೆಲಸವನ್ನು ವೇದಿಕೆಯ ವತಿಯಿಂದ ಮಾಡಲಾಗುತ್ತಿದೆ. ಇದುವರೆಗೆ 13211 .ಸ್ವಾಸ ಸಂಕಲ್ಪ ಕಾರ್ಯಕ್ರಮಗಳ ಮೂಲಕ 10,21, 220 ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಬೋಧನೆ ನೀಡಲಾಗಿದೆ. ಈ ನಿಟ್ಟಿನಲ್ಲಿ 1215 ತರಬೇತುದಾರರನ್ನು ತರಬೇತಿಗೊಳಿಸಿ ಪಠ್ಯವಸ್ತು ನೀಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆ:

ರಾಜ್ಯಾದ್ಯಂತ ಜಿಲ್ಲಾ ವೇದಿಕೆಗಳು, ತಾಲೂಕು ವೇದಿಕೆಗಳು, ವಲಯ ವೇದಿಕೆಗಳು ರಚಿತವಾಗಿದ್ದು ಸುಮಾರು 10,500 ಸಮಾನಮನಸ್ಕ ಪದಾಧಿಕಾರಿಗಳು ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿದ್ದಾರೆ. ನಿರ್ಮಾಣದ ಅಂಗವಾಗಿ ಜಿಲ್ಲಾ ವೇದಿಕೆಗಳ ಮೂಲಕ ಜಾಗೃತ ಕಾರ್ಯಕ್ರಮಗಳು, ಕಾಯಿ, ಕರಪತ್ರ, ಬೀದಿನಾಟಕ, ಹಕ್ಕೊತ್ತಾಯ, ಮನೆಭೇಟಿ, ಧಾರ್ಮಿಕ ಕಾರ್ಯಕ್ರಮ, ಮಹಿಳಾ ಸಮಾವೇಶ, ಮಾದಕವನ್ನು ವಿರೋಧಿ ಮತ್ತು ಧೂಮಪಾನ ವಿರೋಧಿ ದಿನಾಚರಣೆ, ಗಾಂಧಿಜಯಂತಿ ಕಾರ್ಯಕ್ರಮ, ನವಜೀವನೋತ್ಸವ ಕಾರ್ಯಕ್ರಮ, ಕುಟುಂಬೋತ್ಸವ ಕಾರ್ಯಕ್ರಮ, ವ್ಯಸನಿಗಳ ಮಕ್ಕಳಿಗೆ ಜಾಗೃತಿ ಸಪ್ತಾಹ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತ ಸಮಾಜವನ್ನು ಸೃಷ್ಟಿಸುವ ಹಾಗೂ ಈ ನಿಟ್ಟಿನಲ್ಲಿ ಸ್ವಯಂಸೇವಕರಾಗಿ ದುಡಿಯಲು ಜನರಿಗೆ ಪ್ರೇರಣೆ ನೀಡಲಾಗುತ್ತಿದೆ. ಇದುವರೆಗೆ 19,923 ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆಯ ಕಡಬ ಅಧ್ಯಕ್ಷ ಮಹೇಶ್ ಕೆ. ಸವಣೂರು, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜಿಲ್ಲಾ ಯೋಜನಾಧಿಕಾರಿ ಗೋಪಾಲಾಚಾರ್ಯ, ಉಡುಪಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top