ಪುತ್ತೂರು: ಭಾರತದ ಇತಿಹಾಸ ಸಾವಿರಾರು ವರ್ಷ. ಈ ದೇಶ ಸುಮ್ಮನೆ ಬದುಕಿ ಬರಲಿಲ್ಲ. ಸಾಯುವವರನ್ನು ಬದುಕುವ ಹಾಗೆ ಮಾಡಿರುವ, ಜೀವನದ ದೃಷ್ಟಿ ನೀಡಿರುವ ದೇಶ ಭಾರತ, ಸಮಾಜ ಹಿಂದೂ ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಬುಧವಾರ ಸಂಜೆ ಪುತ್ತಿಲ ಕೆರೆಮನೆ ಕಟ್ಟೆಯಲ್ಲಿ ನಡೆದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಭಾರತದ ಮೂಲ ಚಿಂತನೆಯಿಂದ ಜಗತ್ತಿನ ಇತರ ದೇಶದವರು ಪೂಜನೀಯ ಭಾವನೆಯಿಂದ ನೋಡಿದರೆ ನಮ್ಮ ದೇಶದವರು ಭಾರತವನ್ನು ಪೂಜಿಸುತ್ತಾರೆ. ಭಾರತ ಆಧ್ಯಾತ್ಮಿಕ ಚಿಂತನೆ ಮಾಡಿಕೊಂಡು ಬಂದಿರುವ ದೇಶ. ಧರ್ಮ, ಸಂಸ್ಕೃತಿ ಆಧಾರದಲ್ಲಿ ಜೀವನ ಮೌಲ್ಯ ಇಟ್ಟುಕೊಂಡು ಬಂದಿರುವ ದೇಶ ಎಂದರು.
1951 ರಲ್ಲಿ ಜನಸಂಘ ಆರಂಭವಾಯಿತು. ಸಂಘಟನೆಕ್ಕೋಸ್ಕರ ಬಲಿದಾನ ಶುರುವಾಯಿತು. ಪ್ರಾರಂಭದ ಬಲಿದಾನ ಶ್ಯಾಮ್ ಪ್ರಸಾದ್ ಮುಖರ್ಜಿ ಈ ದೇಶ ನಮ್ಮ ಹಿಂದೂಗಳ ದೇಶ. ಹಿಂದುತ್ವವೇ ಮೂಲ ಚಿಂತನೆ ಎಂದು ಬೆಳೆದುಕೊಂಡು ಬಂದಿರುವ ಪಕ್ಷ. ಅದಕ್ಕೋಸ್ಕರ ಭಾರತೀಯ ಜನತಾ ಪಾರ್ಟಿಯನ್ನು ಬೆಳೆಸಿಕೊಂಡು ಬರಲಾಗಿದೆ. ಪಿಎಫ್ಐಯಂತಹ ದೇಶದ್ರೋಹದ ಸಂಘಟನೆಯನ್ನು ದಮನ ಮಾಡಲು ಮೇ 10ರಂದು ಒಳ್ಳೆಯ ಕಾಲ ಎಂದು ಹೇಳಿದ ಅವರು, ಪಕ್ಷ ಇಲ್ಲ, ಸಂಘಟನೆ ಇಲ್ಲ. ಅಂತಹವರು ಏನು ಮಾಡಬಹುದು. ಅರ್ಥ ಆಗ್ತಾ ಇಲ್ಲ. ಪಕ್ಷೇತರರಾಗಿ ನಿಂತವರು ಸ್ವಂತ ಸಾಮರ್ಥ್ಯದಿಂದ ಮತ ಕೇಳಲಿ. ಮೋದಿಜಿ, ಯೋಗಿಜಿ ಹೇಸರು ಹೇಳಿಕೊಂಡು ಮತ ಕೇಳುವುದು ಬೇಡ ಎಂದು ಅವರು ಹೇಳಿದರು.
ಹಿಂದೂ ಜಾಗರಣಾ ವೇದಿಕೆಯ ಡಾ.ಎಂ.ಕೆ.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲಾ ಸೇರಿ ಒಳ್ಳೆಯ ಮನಸ್ಸಿನಿಂದ ಹಿಂದೂ ಸಮಾಜ ಕಟ್ಟುತ್ತಿದ್ದೇವೆ. ದೇಶ ಹಿಂದೂ ರಾಷ್ಟ್ರ ಆಗಬೇಕು. ಆದರೆ ಹಿಂದೂಗಳ ಕಷ್ಟಗಳು ಉಲ್ಭಣ ಆಗಿದೆ. ನಮ್ಮ ಉಸಿರು ಹಿಂದೂ ಆಗಬೇಕು ಎಂಬ ನಿಟ್ಟಿನಲ್ಲಿ ಹಿಂದೂಗಳಿಗೆ ತರಬೇತಿ ನಡೆದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಆದರೆ ಪ್ರಭಾಕರ ಭಟ್ಟರು ಕಲ್ಲಡ್ಕದಲ್ಲಿ ರಾಮಮಂದಿರ ಕಟ್ಟಿದರು. ಇಂದು ಹಿಂದೂ ಧರ್ಮ ಒಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ. ದಲಿತರನ್ನು ಮುಸ್ಲಿಂರು ತಮ್ಮ ಧರ್ಮಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. 2040ರಲ್ಲಿ ಮುಸ್ಲಿಂ ರಾಷ್ಟ್ರ ಆಗಬೇಕು ಎಂಬ ಹುನ್ನಾರ ನಡೆಯುತ್ತಿರುವುದು ಆಘಾತಕಾರಿ ಎಂದ ಅವರು, ದೇವಸ್ಥಾನದ ಕಾರ್ಯಕ್ರಮಕ್ಕೆ ಕೋರ್ಟಿನಿಂದ ತಡೆ ತರುವುದು ಹಿಂದುತ್ವವೇ, ಹಿಂದೂ ನಾಯಕ ಆಗಬೇಕಾದರೆ ಎಂಎಲ್ ಎ ಆಗಬೇಕೇ? ಹುದ್ದೆಕ್ಕೋಸ್ಕರ ಹಿಂದೂತ್ವ ಮಾಡಬಾರದು ಎಂದು ಹೇಳಿದ ಅವರು, ಕಾಂಗ್ರೆಸ್ ನವರು ದೇಶಕ್ಕೆ ಯಾವುದೇ ಒಳ್ಳೆಯ ಕೆಲಸ ಮಾಡುವುದನ್ನು ವಿರೋಧಿಸುತ್ತಾರೆ. ಮತಾಂತರ, ಇನ್ನಿತರ ದೇಶದ್ರೋಹ ಕೆಲಸ ಮಾಡುವುದೇ ಅವರ ಜಾಯಮಾನ. ಮೋದಿ ಪ್ರಧಾನಿ ಆದ ಮೇಲೆ ಇದಕ್ಕೆ ಕಡಿವಾಣ ಬಿದ್ದಿದೆ ಎಂದರು.