ಪುತ್ತೂರು: ಪುತ್ತೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ, ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್, ರೋಟರಿ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ಮತದಾರರ ಜಾಗೃತಿಗೊಂದು ಕವಿಗೋಷ್ಠಿ ಕಾರ್ಯಕ್ರಮ ಮಂಗಳವಾರ ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ 5371 ಯುವ ಮತದಾರರಿದ್ದು, ಶೇ.100 ರಷ್ಟು ಮತದಾನ ಆಗುವ ಮೂಲಕ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರಬೇಕು. ಪ್ರತಿಯೊಬ್ಬರು ಜವಾಬ್ದಾರಿಯಿಂದ ಅರಿತು ಮತದಾನ ಮಾಡಿದರೆ ಸದೃಢ ಸರಕಾರಿ ರಚನೆ ಸಾಧ್ಯ. ಈ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಸಾಧ್ಯ ಎಂದ ಅವರು, ಕವಿಗಳು ವಾಚಿಸುವ ಕವನದಿಂದ ಸಾವಿರಾರು ಮತದಾರರ ಬದಲಾವಣೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಎಲೈಟ್ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ ಕೆ. ಆಚಾರ್ ಪಾಲ್ಗೊಂಡಿದ್ದರು. ಬಳಿಕ ಮಧ್ಯಾಹ್ನ 12 ಗಂಟೆ ತನಕ ಸುಮಾರು 40 ರಷ್ಟು ಆಯ್ದ ಕವಿಗಳು ಮತದಾರರನ್ನು ಹುರಿದುಂಬಿಸುವ ತಮ್ಮ ಕವನ ವಾಚಿಸಿದರು. ಭರತ್ ಸ್ವಾಗತಿಸಿದರು. ಸಂಸಾರ ಜೋಡುಮಾರ್ಗದ ನಿರ್ದೇಶಕ, ಪತ್ರಕರ್ತ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.