ಪುತ್ತೂರು: ಪ್ರಚಾರ – ಅಪಪ್ರಚಾರಗಳಿಂದಲೇ ತಾನು ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳಿಂದ ಸಂತೃಪ್ತನಾಗಿದ್ದೇನೆ. ಪುತ್ತೂರು ಸೇರಿದಂತೆ ರಾಜ್ಯದಲ್ಲಿ 130 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪುತ್ತೂರು ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೂಂಡಾ ರಾಜ್ಯವಾಗಿದ್ದ ಪುತ್ತೂರಲ್ಲಿ ಶಾಂತಿ ನೆಲೆಸಲು ಬಿಜೆಪಿ ಕಾರಣ. 90ರ ದಶಕದಲ್ಲಿ ಪುತ್ತೂರು ಹೇಗಿತ್ತು. ಸಂಜೆ 6 ಗಂಟೆ ನಂತರ ಪುತ್ತೂರಲ್ಲಿ ನಡೆದಾಡಲು ಸಾಧ್ಯವಿರಲಿಲ್ಲ. ಅಡಕೆ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಬಂದರೆ, ತಲವಾರು ಹಿಡಿದು ದೋಚುವ ಪರಿಸ್ಥಿತಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಪರಿಸ್ಥಿತಿಯನ್ನು ಸರಿಪಡಿಸಲಾಯಿತು. ಆದ್ದರಿಂದ ಖಲಿಸ್ತಾನ ಕಮಾಂಡರ್ ನಂತಹ ಸ್ವತಂತ್ರ ನಾಯಕರು ನಮಗೆ ಬೇಡ. ಅಂತಹ ಗೂಂಡಾ ರಾಜ್ಯಕ್ಕೆ ಮತ್ತೊಮ್ಮೆ ಆಸ್ಪದ ಕೊಡುವುದಿಲ್ಲ ಎಂದು ಹೇಳಿದರು.
ಒಳ ಒಪ್ಪಂದ
ಅಶೋಕ್ ರೈ ಕಾಂಗ್ರೆಸ್ ಸೇರಲು ತಾನು ಸಹಕಾರ ನೀಡಿದ್ದೇನೆ ಎಂದು ರುಜುವಾತುಪಡಿಸಿದರೆ ನೀವು ಹೇಳಿದಂತೆ ಕೇಳಲು ತಾನು ಸಿದ್ಧ ಎಂದು ಡಿ.ವಿ. ಸವಾಲೆಸೆದರು. ಬಿಜೆಪಿಯನ್ನು ಸೋಲಿಸಲು ಇತರ ಅಭ್ಯರ್ಥಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವರದಿಗಳು ನಮಗೆ ಬಂದಿವೆ. ಇವರೆಲ್ಲ ಸೇರಿಕೊಂಡು ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿ.ವಿ. ಆರೋಪ ಮಾಡಿದರು.
ಆದರ್ಶ ನಾಯಕರು:
ಕ್ಷೇತ್ರಕ್ಕೆ ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದ ಸಂಜೀವ ಮಠಂದೂರು, ಇಂದು ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಸಚಿವರಾಗಿದ್ದ ಅಂಗಾರರು ಈಗ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ರಘುಪತಿ ಭಟ್ ಅವರು ಕೂಡ ಅಭ್ಯರ್ಥಿ ಪರವಾಗಿ ನಿಂತಿದ್ದಾರೆ. ಇವರೆಲ್ಲ ನಮಗೆ ಮಾದರಿ, ಆದರ್ಶ ವ್ಯಕ್ತಿಗಳು. ಇಂತಹ ಸಂತೃಪ್ತ ನಾಯಕರು, ಕಾರ್ಯಕರ್ತರನ್ನು ಸಂತೃಪ್ತಿಗೊಳಿಸುತ್ತಾರೆ ಎಂದು ಸದಾನಂದ ಗೌಡ ಹೇಳಿದರು.