ಪುತ್ತೂರು: ಕಾರ್ಮಿಕ ವರ್ಗದ ಹಕ್ಕು ಸವಲತ್ತುಗಳನ್ನು ಕಿತ್ತು ಹಾಕಿದ್ದಲ್ಲದೆ, ಮಾಲಕರ ಪರ ಕಾನೂನು ತಿದ್ದುಪಡಿ ಮಾಡಿ ತ್ಯಾಗ ಬಲಿದಾನಗಳಿಂದ ಪಡೆದ ಹಕ್ಕಾದ 8 ಗಂಟೆ ಕೆಲಸವನ್ನು 12 ಗಂಟೆ ಕೆಲಸಕ್ಕೆ ಏರಿಸಿ ಡಬಲ್ ಇಂಜಿನ್ ಸರಕಾರ ಕಾರ್ಮಿಕ ವರ್ಗಕ್ಕೆ ದ್ರೋಹ ಎಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಅವರು ಮಂಗಳವಾರ ಸಿಐಟಿಯು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ನಡೆದ ಮೇ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 4 ವರ್ಷಗಳ ಅವಧಿಯಲ್ಲಿ ರಾಜ್ಯ ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಕರಣ ಮಾಡಿದ್ದಲ್ಲದೆ ಇರುವ ಉದ್ಯೋಗಗಳನ್ನು ನಾಶ ಮಾಡಿ ನಿರುದ್ಯೋಗ ಹೆಚ್ಚಿಸಿದ ಸರಕಾರ ರಾಜ್ಯದ ಆರ್ಥಿಕತೆಯನ್ನು ಹಾಗೂ ಜನರ ಬದುಕನ್ನು ಸರ್ವ ನಾಶಗೊಳಿಸಿದೆ ಎಂದರು. ನಾವು ಕಾರ್ಮಿಕ ವರ್ಗ ಇದರ ವಿರುದ್ದ ದ್ವನಿಯಾಗುವುದಲ್ಲದೆ, ಕಾರ್ಮಿಕ ವರ್ಗವನ್ನು ನಾಶ ಮಾಡಿದ ಯಾವುದೇ ರಾಜಕೀಯ ಉಳಿಯುವುದಿಲ್ಲ ಎಂದು ತೋರಿಸಿಕೊಡಬೇಕಿದೆ ಎಂದರು
ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಲೆ ಏರಿಕೆ ಮಾಡಿ ದುಡಿದ ವೇತನವನ್ನೂ ಕೊಡಿಸದೆ ಕಾರ್ಮಿಕ ವರ್ಗದ ಬದುಕು ಕಸಿಯುವ ಸರಕಾರ ಧರ್ಮ ರಕ್ಷಕರೆಂಬ ಪೋಸು ಕೊಡುತ್ತಾ ಧರ್ಮದ ಮಾನವನ್ನೂ, ಇತ್ತ ಕಾರ್ಮಿಕರಿಗೂ ದ್ರೋಹವನ್ನೂ ಬಗೆಯುತ್ತಿದೆ ಎಂದರು. ಕಳೆದ 4 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ವೇತನ ನೀಡದೆ ವಂಚಿಸಿದ ಮಾಲಕರ ವಿರುದ್ದ ಕ್ರಮಕೈಗೊಳ್ಳದ ಸರಕಾರ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಗ್ರಾಚ್ಯುವಿಟಿ ನೀಡದೆ ವಂಚಿಸುತ್ತದ್ದರೂ ಕಾರ್ಮಿಕರ ಸಹಾಯಕ್ಕೆ ಬಾರದ ಸರಕಾರ ನಮ್ಮನ್ನಾಳುತ್ತಿರುವುದು ಖೇದಕರ ಎಂದರು. ಬಿಸಿಯೂಟ ಕಾರ್ಮಿಕರಿಗೆ ಕನಿಷ್ಟ ಮಾಸಿಕ 10 ಸಾವಿರ ರೂ. ವೇತನ ನೀಡದೆ ಜೀತ ಮಾಡಿವುಸುವುದನ್ನು ಖಂಡಿಸಿದ ಅವರು 2014 ರಲ್ಲಿ ನರೇಂದ್ರ ಮೋದಿ ಸರಕಾರ ಸಂಬಳವನ್ನೂ ಏರಿಸಿಲ್ಲ ಎಂಬುದು ಮಹಿಳಾ ವಿರೋದಿ ಸರಕಾರ ಎಂದು ಸಾಬೀತು ಪಡಿಸಿದೆ.
ಈ ಸಂದರ್ಭ ಪುತ್ತೂರು ಸಿಪಿಐ{ಎಂ) ಮುಖಂಡ, ವಕೀಲ ಪಿ.ಕೆ .ಸತೀಶನ್ ಮಾತಾಡಿದರು. ಈಶ್ವರಿ ಕ್ರಾಂತಿಗೀತೆ ಹಾಡಿ ಸ್ವಾಗತಿಸಿದರು. ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಗುಡ್ಡಪ್ಪ ಗೌಡ, ಅಕ್ಷರದಾಸೋಹ ನೌಕರ ಸಂಘದ ಅದ್ಯಕ್ಷೆ ಸುಧಾ, ಕಾರ್ಯದರ್ಶಿ ರಂಜಿತ, ಪಾಲ್ತಾಡಿ ಪುತ್ತೂರು ಸೇರ್ಪಡೆ ಸಮಿತಿ ಅದ್ಯಕ್ಷ ವೆಂಕಟ್ರಮಣ ಗೌಡ, ಕಾರ್ಮಿಕ ನಾಯಕರುಗಳಾದ ನೆಬಿಸಾ, ರಾಮಚಂದ್ರ, ಭವ್ಯ, ಪುಷ್ಪಾ, ಅಶ್ವಿತ, ಚಂದ್ರಶೇಖರ ಭಟ್ ಮೊದಲಾದವರು ಉಪಸ್ಥಿತರಿದ್ದರು.