ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿ ಉಂಟಾಗಿದ್ದು, ಹತಾಶ ಮನೋಸ್ಥಿತಿಯಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಜೇನು ಗೂಡಿಗೆ ಕಲ್ಲು ಎಸೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರ ಹೋರಾಟದಿಂದ ಹುಟ್ಟಿಕೊಂಡಿರುವ ಬಜರಂಗದಳವನ್ನು ಕೆರಳಿಸುವ ಕೆಲಸಕ್ಕೆ ಕೈಹಾಕಿದ್ದು, ಕೋವಿಡ್ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ತಮ್ಮ ಮನೆ ಮಠಗಳನ್ನು ಬಿಟ್ಟು ಯಾವುದೇ ಫಲಾಪೇಕ್ಷೆಯಿಲ್ಲದೆ ಜನರ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವುದನ್ನು ರಾಜ್ಯದ ಜನತೆ ಮರೆತಿಲ್ಲ. ಸಮಾಜದಲ್ಲಿ ಹಿಂದೂ ಹೆಣ್ಣೂ ಮಕ್ಕಳ ಮಾನ, ಪ್ರಾಣ ರಕ್ಷಣೆ ಮಾಡಿರುವ ಬಜರಂಗದಳ ಹಿಂದೆ ತಾಯಂದಿರ ಪಡೆ ಇದೆ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ತಾಯಂದಿರ ಆಶೀರ್ವಾದವೇ ನಮಗೆ ಸಾಕು. ಬಜರಂಗದಳದ ನಿಷೇಧದ ಕುರಿತು ರಾಜ್ಯದ ತಾಯಂದಿರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ಪ್ರಣಾಳಿಕೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಕುರಿತು ಹೇಳಿರುವುದು ಕಾಂಗ್ರೆಸ್ ನ ನಿರ್ನಾಮಕ್ಕೆ ಗೋವುಗಳ ಶಾಪವೇ ಸಾಕು ಎಂದು ಹೇಳಿದರು.
ಧರ್ಮದ ತುಷ್ಠೀಕರಣ, ಮುಸ್ಲಿಂರ ಓಟಿಗೋಸ್ಕರ ಈ ರೀತಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ನವರಿಗೆ ತಾಕತ್ತಿದ್ದರೆ, ಗಂಡಸ್ತನ ಇದ್ದರೆ ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಬಹಿರಂಗವಾಗಿ ಯಾವುದೇ ವೇದಿಕೆಯಲ್ಲಿ ಹೇಳಲಿ. ಅದಕ್ಕೆ ತಕ್ಕ ಉತ್ತರ ನಾವು ಚುನಾವಣೆಯಲ್ಲಿ ನೀಡಲಿದ್ದೇವೆ. ಎಂದು ಸವಾಲೆಸೆದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಅಧಿಕಾರಕ್ಕೆ ತರಲು ಶತಸಿದ್ಧರಾಗಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ, ವಿಹಿಂಪ ಮುಖಂಡರಾದ ಡಾ.ಕೃಷ್ಣಪ್ರಸನ್ನ, ಶ್ರೀಧರ ತೆಂಕಿಲ, ಜನಾರ್ದನ ಬೆಟ್ಟ, ಹರೀಶ್ ಕುಮಾರ್ ದೋಳ್ಪಾಡಿ ಉಪಸ್ಥಿತರಿದ್ದರು.