ಕಡಬ : ಶಿರಾಡಿ ಗ್ರಾಮದ ಪೇರಮಜಲು ಕಾಲೋನಿಯಲ್ಲಿ ಕೊಳವೆಬಾವಿಗೆ ಪಂಪು ಅಳವಡಿಸದೇ ಇರುವುದರಿಂದ ಕೊಳವೆ ಬಾವಿ ಕೆಟ್ಟು ಹೋಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಕಡಬ ಜಾತ್ಯಾತೀತ ಜನತಾ ದಳದ ವತಿಯಿಂದ ನೀರಿನ ಸಮಸ್ಯೆ ಬಗೆಹರಿಸುವಂತೆ ಕಡಬ ತತಹಸೀಲ್ದಾರ್ ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ನೇತೃತ್ವದಲ್ಲಿ ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಪೇರಮಜಲು ಕಾಲೋನಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಕುಡಿಯುವ ನೀರಿನ ಕೊಳವೆಬಾವಿ ಕೊರೆಸಿ ಹಲವಾರು ವರ್ಷಗಳು ಕಳೆದಿವೆ. ಅದಕ್ಕೆ ಪಂಪು ಅಳವಡಿಸದೇ ಈಗ ಕುಡಿಯುವ ನೀರಿನ ಆಹಾಕಾರ ಉಂಟಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ, ಶಾಸಕರಿಗೆ ಮನವ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನ ಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಹಾಗಾಗಿ ತಕ್ಷಣ ಕುಡಿಯುವ ನೀರು ಒದಗಿಸುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಮಿತಿಯ ಸದಸ್ಯ ಉತ್ತಮನ್ ವಿಟ್ಟಿ, ತಾಲೂಕು ಯುವ ಘಟಕದ ಅಧ್ಯಕ್ಷ ಹರಿಪ್ರಸಾದ್ ಎನ್ಕಾಜೆ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ರಾಜು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.