ಪುತ್ತೂರು: ಬಿಜೆಪಿ ಪಕ್ಷದ ಚಿಹ್ನೆ ಉಪಯೋಗಿಸಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ತಂಡ ಭಾನುವಾರ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಚುನಾವಣಾ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಅವರು ಕುರಿತು ದೂರು ನೀಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಸಾಮಾಜಿಕ ಜಾಲತಾಣಗಳು ಸಹಿತ ಪತ್ರಿಕಾ ಪ್ರಕಟಣೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರನ್ನು ಉಲ್ಲೇಖಿಸು್ವುದರ ಜತೆಗೆ ಭಾವಚಿತ್ರಗಳನ್ನು ಬಳಸುತ್ತಿದ್ದು, ತಾನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ.. ಪಕ್ಷೇತರ ಅಭ್ಯರ್ಥಿ ಚುನಾವಣಾ ಆಯೋಗ ನೀಡಿದ ಚಿಹ್ನೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಬದಲಾಗಿ ಕಾನೂನು ರೀತಿಯಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಉಪಯೋಗಿಸುವಂತಿಲ್ಲ. ಆದ್ದರಿಂದ ಇಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯವರು ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿಗೆ ತೆರಳಿ ಯಾವುದೇ ಅಕ್ರಮ ಕಂಡು ಬಂದಲ್ಲಿ ವರದಿ ಮಾಡುವಂತೆ ತಿಳಿಸಿದ್ದರು. ಅದರಂತೆ ಏ.30 ಭಾನುವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ನೋಡೆಲ್ ಅಧಿಕಾರಿ ಮಾದರಿ ನೀತಿ ಸಂಹಿತೆ ತಂಡದ ನೋಡಲ್ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರ ತಂಡ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಅವರ ಚುನಾವಣಾ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿ ಚುನಾವಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಲಿಖಿತ ರೂಪದ ಸ್ಪಷ್ಟನೆ :
ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ. ಇದು ಸುಳ್ಳು ಆರೋಪ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣಾಧಿಕಾರಿಯವರಿಗೆ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.