ಪೋಲೀಸರ ಸೂಚನೆ ಲೆಕ್ಕಿಸದೆ,ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಪಿಕ್ ಅಪ್ ಪರಾರಿ
ಕಡಬ : ಕಡಬ ಠಾಣಾ ವ್ಯಾಪ್ತಿಯ ಆತೂರು ಚೆಕ್ ಪೋಸ್ಟ್ ನಲ್ಲಿ ಪೋಲೀಸರ ಸೂಚನೆಯನ್ನೂ ಲೆಕ್ಕಿಸದೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ಎನ್ನಲಾದ ಪಿಕ್ ಅಪ್ ವಾಹನವೊಂದು ಪರಾರಿಯಾದ ಘಟನೆ ಶನಿವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.
ಚೆಕ್ಕ್ ಪೋಸ್ಟ್ ನಲ್ಲಿ ಹಾಕಲಾದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಬದಿಗೆ ತಳ್ಳಿರುವುದಲ್ಲದೆ ಕರ್ತವ್ಯದಲ್ಲಿದ್ದ ಪೋಲೀಸ್ ಸಿಬ್ಬಂದಿಯ ಮೇಲೆಯೂ ಪಿಕ್ ಅಪ್ ಹಾಯಿಸಲು ಹೋಗಿದ್ದು, ಪೋಲೀಸ್ ಸಿಬ್ಬಂದಿ ಬದಿಗೆ ಹಾರಿ ಅಪಾಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಪರಾರಿಯಾದ ಪಿಕ್ ಅಪ್ ನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದಾಗ ಚಾಲಕ ಪಿಕ್ ಅಪ್ ನ್ನು ಗೋಳಿತ್ತಡಿ ಸಮೀಪದ ಶಾರದಾನಗರದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಪಿಕ್ ಅಪ್ ನಲ್ಲಿ ದ್ದ ಮಾಂಸದ ಕಟ್ಟನ್ನು ಚಾಲಕ ವಾಹನದಿಂದ ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೋಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನ ಸದಾ ಗೋಮಾಂಸ ಹಾಗೂ ಅಕ್ರಮ ಗೋಸಾಗಾಟ ನಡೆಸುತ್ತಿರುವ ವಾಹನ ಎನ್ನಲಾಗಿದೆ. ಕೊಯಿಲ ಪರಿಸರದಲ್ಲಿ ನಿರಂತರ ಅಕ್ರಮ ಗೋವಧೆ ನಡೆಯುತ್ತಿದ್ದು, ಇಲ್ಲಿಂದಲೇ ವಾಹನಗಳಲ್ಲಿ ಇತರೆಡೆಗೆ ಮಾಂಸ ಸಾಗಾಟವಾಗುತ್ತಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ದಿನಾ ಬೆಳ್ಳಂಬೆಳಿಗ್ಗೆ ವಾಹನಗಳಲ್ಲಿ ಚೆಕ್ ಪೋಸ್ಟ್ ಮೂಲಕವೇ ಹಾದು ಹೋಗುತ್ತದೆ. ಇದರಿಂದಾಗಿ ಪೋಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಸಾರ್ವಜನಿಕರು ಪೋಲೀಸರ ಅನುಮತಿಯಲ್ಲೇ ಅಕ್ರಮ ಗೋಮಾಂಸ ಸಾಗಾಟವಾಗುತ್ತಿದೆ ಎಂದು ಆರೋಪಿಸುತ್ತಾರೆ.
ಇಲ್ಲಿ ಪೋಲೀಸರು ಜೀವ ಭಯದಿಂದಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಹಿಂದೆ ಇದೇ ಆತೂರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸನೆ ವೇಳೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿ ಚೆಕ್ ಪೋಸ್ಡ್ ನ ಶೆಡ್ಡನ್ನು ಧ್ವಂಸ ಮಾಡಿದ್ದರು, ಈ ಸಂದರ್ಭದಲ್ಲಿ ಪೋಲೀಸರು ಲಾಟಿ ಚಾರ್ಜ್ ಮಾಡಿ ಕಿಡಿಗೇಡಿಗಳನ್ನು ಚದುರಿಸಿದ್ದರು. ಇದೀಗ ಮತ್ತೊಮ್ಮೆ ಅಕ್ರಮ ವ್ಯವಹಾರದ ವ್ಯಕ್ತಿಗಳಿಂದ ಅಟ್ಟಹಾಸ ನಡೆದಿದೆ.
ಇಲ್ಲಿ ಯಾವುದೇ ಜೀವಭದ್ರತೆಯಿಲ್ಲದೆ ಕರ್ತವ್ಯ ನಿರ್ವಹಿಸುವ ಹೋಂಗಾರ್ಡ್ ಗಳು ಕರ್ತವ್ಯದಲ್ಲಿರುತ್ತಾರೆ. ಅವರಿಗೇನಾದರೂ ಸಮಸ್ಯೆಯಾದರೆ ಅವರ ಕುಟುಂಬವನ್ನು ನೋಡುವವರು ಯಾರು ಎಂದು ಪ್ರಶ್ನಿಸುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರಗಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.