ವಿಟ್ಲ: ಬಿಜೆಪಿ ಡಬಲ್ ಇಂಜಿನಿನಲ್ಲಿ ಮುಂದೆ ಹೋಗುತ್ತಿದ್ದರೆ, ಕಾಂಗ್ರೆಸ್ ರಿವರ್ಸ್ ಗೇರಿನಲ್ಲಿ ಹಿಂದೆ ಸಾಗುತ್ತಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಮತದಾರರು ಮಾಡಬೇಕಾಗಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣೆಯ ಸಹಪ್ರಭಾರಿ, ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ ಹೇಳಿದರು.
ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿವೆ. ಬಿಜೆಪಿ ಸರಕಾರ ನಡೆಸಿರುವ ಕೆಲಸಗಳನ್ನು ಗಮನಿಸಿದ ಕೇಂದ್ರದ ನಾಯಕರು, ಜನರ ಬಳಿಗೆ ಬರುತ್ತಿದ್ದಾರೆ. ಇದು ರಾಜ್ಯದ ನಾಯಕರಿಗೆ ಕೆಲಸ ಮಾಡಲು ಇನ್ನಷ್ಟು ಹುರುಪು ನೀಡಿದೆ. ರಾಜ್ಯಾದ್ಯಂತ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದು, ಖಂಡಿತವಾಗಿಯೂ ಬಿಜೆಪಿ ಸರಕಾರ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ಯಾರೆಂಟಿ ಹತಾಶೆಯ ಸೂಚಕ:
ಕಾಂಗ್ರೆಸ್ ಸರಕಾರ ಗ್ಯಾರೆಂಟಿಗಳನ್ನು ನೀಡುವ ಮೂಲಕ ಜನರನ್ನು ಮರುಳು ಮಾಡುವ ದುಸ್ಸಾಹಸಕ್ಕೆ ಮುಂದಾಗಿದೆ. ತಮಿಳುನಾಡಿನಲ್ಲಿಯೂ ಚುನಾವಣೆ ಸಂದರ್ಭ ಆಡಳಿತಾರೂಢ ಪಕ್ಷ ತಿಂಗಳಿಗೆ 2 ಸಾವಿರ ರೂ. ನೀಡುವುದಾಗಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು 2 ವರ್ಷ ಕಳೆಯಿತು. ಇದುವರೆಗೆ ಜನರಿಗೆ 2 ಸಾವಿರ ರೂ. ಬಿಡಿ, 2 ರೂ. ನೀಡಲು ಆಗಿಲ್ಲ. ಆದ್ದರಿಂದ ಕಾಂಗ್ರೆಸಿನ ಗ್ಯಾರೆಂಟಿಗಳು, ಅದರ ಅಸಹಾಯಕತೆಯನ್ನು ಸೂಚಿಸುತ್ತವೆ ಎಂದು ವ್ಯಾಖ್ಯಾನಿಸಿದರು.
ರಾಜ್ಯದಲ್ಲಿ ಬಿಜೆಪಿಗೆ 130ಕ್ಕೂ ಅಧಿಕ ಸ್ಥಾನ:
ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಇದೇ ಕಾಂಗ್ರೆಸಿಗರು ಕುಡಿಯುವ ನೀರಿನಿಂದ ಹಿಡಿದು 2ಜಿವರೆಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ 1400 ಕೋಟಿ ರೂ.ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಇಂತಹವರು 2 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ನರೇಂದ್ರ ಮೋದಿ ಅವರಿಗೆ ಸಲಹೆ ನೀಡುತ್ತಾರೆ. ಪ್ರಧಾನಿಯನ್ನು ವ್ಯಂಗ್ಯವಾಡುವ ಕಾಂಗ್ರೆಸಿಗರಿಗೆ, ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ 130ಕ್ಕೂ ಅಧಿಕ ಸ್ಥಾನಗಳನ್ನು ಪಡೆದು, ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ಜನಪರವಾಗಿ ಮಾಡಲು ಮತದಾರರು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಡಬಲ್ ಇಂಜಿನ್ ಸರಕಾರ ಆಯ್ಕೆ ಮಾಡಿ: ಮಠಂದೂರು
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾಂಗ್ರೆಸ್ ಸರಕಾರ ಈಗಾಗಲೇ ಹಲವಾರು ವ್ಯಕ್ತಿಗಳ ಹತ್ಯೆಯಲ್ಲಿ ಶಾಮೀಲಾಗಿದೆ. ಮಕ್ಕಳ ಅನ್ನಕ್ಕೆ ಕಲ್ಲು ಹಾಕುವ ಕೆಲಸ ಮಾಡಿದೆ. ಆದರೆ, ಬಿಜೆಪಿ ಸರಕಾರ ಆತ್ಮನಿರ್ಭರ ಯೋಜನೆ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ಆದ್ದರಿಂದ ಡಬಲ್ ಇಂಜಿನ್ ಸರಕಾರವನ್ನು ಮತದಾರರು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ವಿನಂತಿಸಿದರು.
ಮನಸ್ಸಿಗೆ ವಯಸ್ಸಾಗದು: ಆಶಾ ತಿಮ್ಮಪ್ಪ
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಕ್ಷೇತ್ರದ ಮೂಲೆಮೂಲೆಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಅದನ್ನು ಮತವಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಇದುವರೆಗೆ ಕಾರ್ಯಕರ್ತರ ಶ್ರಮದಿಂದಲೇ ಬಿಜೆಪಿ ಪಕ್ಷ ಬೆಳೆದು ಬಂದಿದೆ. ಇಲ್ಲಿ ವ್ಯಕ್ತಿ ನಗಣ್ಯ, ಪಕ್ಷ ಮುಖ್ಯ ಎಂಬ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ. ಅಭಿವೃದ್ಧಿ ಪರವಾಗಿರುವ ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ಹುಮ್ಮಸ್ಸು ಬರುತ್ತಿದೆ. ಕೆಲಸ ಮಾಡುವ ಇಚ್ಛೆಯುಳ್ಳವರಿಗೆ ಯಾವತ್ತೂ ವಯಸ್ಸು ಗಣನೆಗೆ ಬಾರದು. ಮನಸ್ಸಿಗೆ ಎಂದಿಗೂ ವಯಸ್ಸಾಗದು ಎಂದು ಆರೋಪಗಳಿಗೆ ಉತ್ತರಿಸಿದರು.
ರಾಷ್ಟ್ರೀಯ ಮಹಿಳಾ ಮೋರ್ಚಾದ ಸದಸ್ಯೆ ಬಿಂದು ಸುರೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ರೈತ ಮೋರ್ಚಾ ಕಾರ್ಯದರ್ಶಿ ರೇಣುಕಾ ಪ್ರಸಾದ್, ಸಹಜ್ ರೈ, ನವೀನ್ ಪಡ್ನೂರು, ಸುನಿಲ್ ದಡ್ಡ, ಕಿಶೋರ್ ಕೊಟ್ಯಾಡಿ, ಮೀನಾಕ್ಷೀ ಶಾಂತಿಗೋಡು, ಕೆ.ಟಿ. ಶೈಲಜಾ ಭಟ್, ಯಶನ್ವಿನಿ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು. ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.
ವಿಟ್ಲದಲ್ಲಿ ಮಿಂಚಿದ ರೋಡ್ ಶೋ:
ಅಸಂಖ್ಯಾತ ಕಾರ್ಯಕರ್ತರ ಉದ್ಘೋಷದೊಂದಿಗೆ ನಡೆದ ರೋಡ್ ಶೋ ವಿಟ್ಲ ಪೇಟೆಯಲ್ಲಿ ವೈಭವೋಪೇತವಾಗಿ ನಡೆಯಿತು. ಕಿಕ್ಕಿರಿದು ನೆರೆದ ಜನಸಂದಣಿಯ ನಡುವೆ ಗೊಂಬೆ, ಬ್ಯಾಂಡ್ – ವಾದ್ಯಗಳ ಘೋಷದೊಂದಿಗೆ ಭಗವಧ್ವಜ, ಕೇಸರಿ ಬಾವುಟ ರೋಡ್ ಶೋಗೆ ಹೊಸ ಲುಕ್ ನೀಡಿತು. ರೋಡ್ ಶೋ ನಡೆಯುತ್ತಿದ್ದರೆ, ಅಂಗಡಿ ಮುಂಗಟ್ಟುಗಳ ಮೇಲ್ಭಾಗದಲ್ಲಿ ನಿಂತ ಜನರು ತಮ್ಮ ಮೊಬೈಲಿನಲ್ಲಿ ಚಿತ್ರ ಸೆರೆಹಿಡಿಯುತ್ತಿದ್ದರು.