ಪುತ್ತೂರು: ಹಣ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಲು ಸಾಧ್ಯ. ಹೀಗಿದ್ದರೂ ಬಿಜೆಪಿ ಸರಕಾರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಕಾಂಗ್ರೆಸ್ ಪಕ್ಷ ಒಂದು ಮುಳುಗುವ ಹಡಗು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದರು.
ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಸ, ವಂಚನೆ, ಭ್ರಷ್ಟಾಚಾರ ಕಾಂಗ್ರೆಸ್ ನ ಜನ್ಮಸಿದ್ಧ ಹಕ್ಕು, ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲು ಕಾಂಗ್ರೆಸ್ ಪಕ್ಷಕ್ಕೆ ಹಣ ಕೊಡಬೇಕು ಎಂದು ಅವರ ಪಕ್ಷದವರೇ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ 130ಕ್ಕೂ ಮಿಕ್ಕಿದ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಶೇ. 40ರಷ್ಟು ಕಮೀಷನ್ ಪಡೆದಿದೆ ಎಂದು ಆರೋಪ ಮಾಡುತ್ತಿದೆ. ಇಂತಹ ಆರೋಪ ಮಾಡಿದ ಕಾಂಗ್ರೆಸ್ ಮುಖಂಡ ಕೆಂಪಯ್ಯ ವಿರುದ್ಧ ಪಕ್ಷ ದೂರು ನೀಡಿದ್ದು, ಕಮಿಷನ್ ಪಡೆದ ಬಗ್ಗೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಪ್ರತಿಕ್ರಿಯಿಸಿ, ಕಮಿಷನ್ ಪಡೆದುಕೊಂಡ ಬಗ್ಗೆ ಮಾಹಿತಿ ಇದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಸೂಕ್ತ ತನಿಖೆ ನಡೆಸುವ ಭರವಸೆಯನ್ನೂ ಈಗಾಗಲೇ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.