ಪುತ್ತೂರು: ಕಾಂಗ್ರೆಸಿನೊಳಗಡೆಯಿದ್ದ ಬಂಡಾಯ, ಕೆಸರೆರಚಾಟ ಈ ಬಾರಿ ಬಿಜೆಪಿಗೆ ಶಿಫ್ಟ್ ಆಗಿದೆ.
ಶಿಸ್ತಿಗೆ ಹೆಸರಾಗಿದ್ದ ಪಕ್ಷ ಬಿಜೆಪಿ. ಇಲ್ಲಿ ಎಲ್ಲದಕ್ಕೂ ಒಂದು ಚೌಕಟ್ಟು ಇದೆ. ನಿಯಮ ಇದೆ. ಹೈಕಮಾಂಡ್ ಹೇಳಿದ್ದಕ್ಕೆ ಇಲ್ಲ ಎನ್ನುವವರೇ ಇಲ್ಲ. ಆದರೆ ಈ ಬಾರಿ ಬಿಜೆಪಿ ಲಂಗು ಲಗಾಮಿಲ್ಲದ ಕುದುರೆಯಂತಾಗಿದೆ. ಹೇಳುವವರು – ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ.
ಪ್ರತಿ ಬಾರಿಯೂ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದೊಳಗೆ ಕೆಸರೆರಚಾಟ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಒಗ್ಗಟ್ಟೇ ಒಗ್ಗಟ್ಟು. ತಳಮಟ್ಟದಲ್ಲೇ ಭಾರೀ ಪ್ರಚಾರ ನಡೆಯುತ್ತಿದೆ. ಹೇಮನಾಥ್ ಶೆಟ್ಟಿ, ಶಕುಂತಳಾ ಶೆಟ್ಟಿ ಜತೆಯಾಗಿ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಗೆ ಸಾಥ್ ನೀಡುತ್ತಿದ್ದಾರೆ. ಕಾಂಗ್ರೆಸಿನ ಒಗ್ಗಟ್ಟು ನೋಡಿ, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸಕ್ಕಿಳಿದಿದ್ದಾರೆ.
ಪ್ರತಿ ಬಾರಿಯ ಚುನಾವಣೆ ಸಂದರ್ಭ ಕಾಂಗ್ರೆಸಿನಲ್ಲಿದ್ದ ಗೊಂದಲ, ಈ ಬಾರಿ ಬಿಜೆಪಿಯೊಳಗಡೆ ಕಾಣಿಸುತ್ತಿದೆ. ಹಿರಿಯ ನಾಯಕರ ಹೇಳಿಕೆಗಳು, ಬಿಜೆಪಿ ಅಧ್ಯಕ್ಷರುಗಳ ಮೌನ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಲು ಕಾರಣವಾಗಿವೆಯೋ ಏನೋ ಎಂಬಂತೆ ಭಾಸವಾಗುತ್ತಿವೆ.
ಆರ್.ಎಸ್.ಎಸ್. ಈಗಾಗಲೇ ಕಾರ್ಯಪ್ರವೃತವಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದೆ. ಆರ್.ಎಸ್.ಎಸ್. ನಾಯಕರು ಬಿಡುವಿಲ್ಲದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ರಾಜ್ಯ, ರಾಷ್ಟ್ರದ ಸ್ಟಾರ್ ಪ್ರಚಾರಕರನ್ನು ಕರೆಸುವ ಪ್ರಯತ್ನವನ್ನು ನಡೆಸುತ್ತಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಮೌನ!
ಹಿಂದುತ್ವ ವರ್ಸಸ್ ಹಿಂದುತ್ವ:
ಪಕ್ಷೇತರ ಅಭ್ಯರ್ಥಿ ಕಣಕ್ಕೆ ಧುಮುಕ್ಕುತ್ತಿದ್ದಂತೆ, ಬಿಜೆಪಿ ನಾಯಕರ ನಡುವೆ ಗೊಂದಲ ಆವರಿಸಿದಂತೆ ಭಾಸವಾಗುತ್ತಿದೆ. ಇದು ಗೊಂದಲವೇ, ಅಲ್ಲ ಜಾಣ ಮೌನವೇ ತಿಳಿಯದು. ಬಿಜೆಪಿ ನಾಯಕರ ಈ ಗೊಂದಲ ನೂರಾರು ಅರ್ಥಗಳನ್ನು ವ್ಯಾಖ್ಯಾನಿಸುತ್ತಿವೆ.