ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ವರದಿ | ಶಾಸಕ ಸಂಜೀವ ಮಠಂದೂರಿಗೆ 2ನೇ ಸ್ಥಾನ

ಪುತ್ತೂರು: ವಿಧಾನಸಭೆಯಲ್ಲಿ 2018ರಿಂದ 2022ರ ನಡುವೆ ನಡೆದಿರುವ ಅಧಿವೇಶನಗಳಲ್ಲಿ ಭಾಗಿಯಾದ ಶಾಸಕರ ಹಾಜರಾತಿಯ ವರದಿ ಪ್ರಕಟಗೊಂಡಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

2018ರಿಂದ 2022ರ ತನಕ ನಡೆದ 15 ಅಧಿವೇಶನಗಳಲ್ಲಿ ಶಾಸಕರ ಹಾಜರಾತಿ ಬಗ್ಗೆ ಕೇಳಲಾದ ಪ್ರಶ್ನೆಗಳು, ಮಸೂದೆಗಳ ಮಂಡನೆ, ಹಾಗೂ ಅಂಗೀಕಾರ ಸೇರಿ ಇತರ ಮಾಹಿತಿ ಒಳಗೊಂಢ ಅಂಶಗಳು ಈ ವರದಿಯಲ್ಲಿವೆ. ಶಾಸಕರ ಕಾರ್ಯಕ್ಷಮತೆ ಬಗ್ಗೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರೀಫಾರ್ಮ್ಸ್ ವರದಿ ಮಾಡಿದೆ.

ಅಧಿವೇಶನದಲ್ಲಿ ಶಾಸಕರ ಹಾಜರಾತಿ ತೀವ್ರವಾಗಿ ಕುಸಿದಿರುವುದು ವರದಿಯಲ್ಲಿ ಬಹಿರಂಗವಾಗಿದೆ. ವಿಧಾನಸಭೆಯಲ್ಲಿ ಅತೀ ಹೆಚ್ಚು ಹಾಜರಾತಿ ಹೊಂದಿರುವ ಶಾಸಕರ ಪೈಕಿ ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್, ಕಲಘಟಗಿ ಬಿಜೆಪಿ ಶಾಸಕ ಚೆನ್ನಪ್ಪ ಮಲ್ಲಪ್ಪ ಸಿಂಬಣ್ಣನವರ್ ತಲಾ ಮೊದಲ ಸ್ಥಾನದಲ್ಲಿದ್ದಾರೆ.































 
 

ಪುತ್ತೂರು ಶಾಸಕ ಸಂಜೀವ ಮಠಂದೂರು, ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ತಲಾ ಎರಡನೇ ಸ್ಥಾನ ಪಡೆದಿದ್ದಾರೆ. ಆದರೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಆರ್.ಶಂಕರ್, ಆನಂದ್ ಸಿಂಗ್, ನಾರಾಯಣ ಗೌಡ, ಎಂಟಿಬಿ ನಾಗರಾಜು, ಡಾ. ಸಿ.ಎನ್. ಅಶ್ವತ್ಥ ನಾರಾಯಣ ಕೆ., ಗೋಪಾಲಯ್ಯ ಹಾಗೂ ಬಿ.ಸಿ. ಪಾಟೀಲ್ ಕಡಿಮೆ ಹಾಜರಾತಿ ಹೊಂದಿದ್ದಾರೆ.

ಪಕ್ಷವಾರು ಹಾಜರಾತಿಯಲ್ಲಿ ಜೆಡಿಎಸ್ ಅಧೀವೇಶನದಲ್ಲಿ ಹೆಚ್ಚು ಭಾಗಿಯಾಗುವವರ ಸಂಖ್ಯೆ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದೆ. 214 ಶಾಸಕರು ಒಟ್ಟು 27583 ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಶಾಂತಿನಗರ ಶಾಸಕ ಎನ್.ಆರ್.ಹ್ಯಾರಿಸ್ 591, ಇಂಡಿ ಶಾಸಕ ಯಶವಂತರಾಯ ಪಾಟೀಲ್ 532, ಮೂಡಬಿದ್ರೆ ಶಾಸಕ ಉಮಾನಾಥ ಎ.ಕೋಟ್ಯಾನ್ 502, ಹೊಳೆರನರಸೀಪುರ ಶಾಸಕ ಎಚ್.ಡಿ.ರೇವಣ್ಣ ಹಾಗೂ ಬಂಗಾಟಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ತಲಾ 487 ಪ್ರಶ್ನೆಗಳನ್ನು ಕೇಳಿದ್ದಾರೆ.

ಶಾಸಕರ ಕಾರ್ಯಕ್ಷಮತೆ ವಿಶ್ಲೇಷಣೆ

ಶಾಸಕರ ಕಾರ್ಯಕ್ಷಮತೆ ವಿಶ್ಲೇಷಿಸುವ ದೃಷ್ಟಿಯಿಂದ ಈ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತ ವ್ಯವಸ್ಥೆ ಉತ್ತೇಜಿಸಲು ಈ ವರದಿ ಅನುಕೂಲವಾಗಿದೆ. ಜತೆಗೆ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಲು ಮತದಾರರಿಗೆ ಸಹಾಯವಾಗಲಿದೆ.

ಪ್ರೊ.ತ್ರಿಲೋಚನ್ ಶಾಸ್ತ್ರೀ, ಎಡಿಆರ್ ಸಂಸ್ಥಾಪಕ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top