ಪುತ್ತೂರು: ಹಿಂದೂಪರ ಕೆಲಸ ಮಾಡಲು ಶಾಸಕನೇ ಆಗಬೇಕೆಂದು ಹಠ ಹಿಡಿದು ನಿಲ್ಲುವುದು ಸರಿಯಲ್ಲ. ಆರ್.ಎಸ್.ಎಸ್., ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅದೆಷ್ಟೋ ಮಹನೀಯರು ಯಾವುದೇ ಹುದ್ದೆಗೆ ಆಸೆ ಪಡದೇ, ಕೆಲಸ ಮಾಡಿದ್ದಾರೆ. ಹೀಗಿರುವಾಗ ಅರುಣ್ ಕುಮಾರ್ ಪುತ್ತಿಲ ಸಿಂಪಥೈಸರ್ ಆಗಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆ ಬಂದಾಗ ಗಲಾಟೆಗೆ ನಿಂತು ಬಿಡುವ ಪ್ರವೃತ್ತಿ ಸರಿಯಲ್ಲ ಎಂದು ವೈದ್ಯ ಡಾ. ಎಂ.ಕೆ. ಪ್ರಸಾದ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಲ ಅವರಲ್ಲಿ ಸಂಘಟನಾ ಶಕ್ತಿ ಇದೆ. ನನ್ನ ಶಿಷ್ಯನೂ ಹೌದು. ಆದರೆ ಶಿಷ್ಯ ಸರಿಯಿಲ್ಲ. ಶಾಸಕನಾಗಬೇಕು ಎಂಬ ಅತ್ಯಾಸೆ ಇದೆ. ಆದ್ದರಿಂದ ಶಾಸಕ ಹುದ್ದೆಗೆ ನಾನೇ ಅವರ ಹೆಸರನ್ನು ಶಿಫಾರಸು ಮಾಡಿಲ್ಲ. ಗಲಾಟೆ ಮಾಡುವ ಶಾಸಕರು ನಮಗೆ ಬೇಕಾಗಿಲ್ಲ. ಆದ್ದರಿಂದ ಅಭಿವೃದ್ಧಿಯ ತುಡಿತ ಇರುವ, ಜನರೊಂದಿಗೆ ಬೆರೆಯುವ ಆಶಾ ತಿಮ್ಮಪ್ಪ ಅವರ ಹೆಸರನ್ನು ಸೂಚಿಸಿದ್ದೇನೆ ಎಂದರು.
ಮರಾಠಿಯಲ್ಲಿ ಪ್ರಾರ್ಥನೆ ಮಾಡಿದ್ದ ಅರುಣ್ ಪುತ್ತಿಲ:
ಪುತ್ತೂರು ಬಿಜೆಪಿಯ ಕಛೇರಿಗೇ ಬಾರದೇ, ಬಿಜೆಪಿಯ ಮುಖಂಡರನ್ನು ಸಂಪರ್ಕಿಸದೇ ತನಗೆ ಶಾಸಕ ಸ್ಥಾನದ ಟಿಕೆಟ್ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದ. ಅರುಣ್ ಕುಮಾರ್ ಪುತ್ತಿಲರವರು ಈ ಹಿಂದೆ ಭಜರಂಗ ದಳದ ಜಿಲ್ಲಾ ಸಂಚಾಲಕರಾಗಿದ್ದರು. ಅವರ ನಡವಳಿಕೆಯಿಂದಾಗಿ ಅವರಾಗಿಯೇ ಪರಿವಾರ ಸಂಘಟನೆಯಿಂದ ಹೊರ ನಡೆದರು. ನಂತರ ಪ್ರಮೋದ್ ಮುತಾಲಿಕರೊಂದಿಗೆ ಕೈಜೋಡಿಸಿ ಶ್ರೀರಾಮ ಸೇನೆಯ ಸಂಚಾಲಕರಾದರು. ಮರಾಠಿಯಲ್ಲಿ ಪ್ರಾರ್ಥನೆಯನ್ನು ಮಾಡಿದರು. ನಂತರ ಪುತ್ತಿಲ ಅವರು ಶ್ರೀರಾಮ ಸೇನೆಯಿಂದ ಹೊರ ಬಂದು, ತನ್ನದೇ ಹಿಂದೂ ಸೇನೆ ರಚಿಸಿ ಅದನ್ನೂ ಸಹ ಅರ್ಧದಲ್ಲೇ ಕೈ ಬಿಟ್ಟರು ಎಂದರು.
ಪಕ್ಷ ಪುತ್ತಿಲರನ್ನು ಕಡೆಗಣಿಸಿಲ್ಲ:
2013 ರಲ್ಲಿ ಸಂಘ ಪರಿವಾರದ ಹಿರಿಯರು ಬಿಜೆಪಿಯಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳಿದಾಗ ತನಗೆ ಅಧ್ಯಕ್ಷ ಸ್ಥಾನವನ್ನೇ ಕೊಡಬೇಕೆಂದು ಹಠ ಹಿಡಿದ ಕಾರಣದಿಂದ, ಬಿಜೆಪಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ತಾನಾಗಿಯೇ ಕೈಚೆಲ್ಲಿದರು. ಸಂಘದ ಹಿರಿಯರು ಬಿಜೆಪಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸೂಚಿಸಿದರೂ ಪಕ್ಷಕ್ಕೆ ಬರಲಿಲ್ಲ. ನಂತರ ಕೂಡಾ ಸಂಘ ಪರಿವಾರದ ಹಿರಿಯರು ಪುತ್ತಿಲರನ್ನು ಕಡೆಗಣಿಸದೇ, ಸಂಘಟನೆಯಲ್ಲಿ ಕೆಲಸ ಮಾಡುವ ಸಲುವಾಗಿ ನಮೋ ಬ್ರಿಗೇಡ್‌ನ ನೇತೃತ್ವವನ್ನು ನೀಡಿದರು ಎಂದು ಡಾ. ಎಂ.ಕೆ. ಪ್ರಸಾದ್ ತಿಳಿಸಿದರು.
ಪುತ್ತಿಲಗೆ ಕಾಂಗ್ರೆಸಿನ ಬೆಂಬಲ:
2008ರ ವಿಧಾನ ಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಶಕುಂತಳಾ ಶೆಟ್ಟಿಯವರೊಂದಿಗೆ ಕೆಲಸ ಮಾಡಿ, ಬಿಜೆಪಿಗೆ ವಿರುದ್ಧವಾಗಿ ನಡೆದರು. ನಂತರದ ಚುನಾವಣೆಗಳಾದ 2013, 2018ರ ಚುನಾವಣೆಗಳಲ್ಲಿಯೂ ಪುತ್ತಿಲರವರು ಪಕ್ಷದ ವಿರುದ್ಧ ಬಂಡಾಯವೆದ್ದು, ತಾನು ಮತ್ತು ತನ್ನ ಬಳಗ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಬಿಜೆಪಿಗೆ ವಿರುದ್ಧವಾಗಿ ಕೆಲಸ ಮಾಡಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಈಗಲೂ ಬಿಜೆಪಿಯ ಮತಗಳನ್ನು ಹಾಳು ಮಾಡಲು, ಕಾಂಗ್ರೆಸ್ ನೊಂದಿಗೆ ಕೈಜೋಡಿಸಿದ್ದಾರೆ ಎಂದು ತಿಳಿದುಬಂದಿದೆ ಎಂದರು.
ದೇವಸ್ಥಾನದೊಳಗೇ ಹಲ್ಲೆ ನಡೆಸಿದ್ದರು:
ಈ ಹಿಂದೆ ಅವರ ವಿರುದ್ಧ ಹಲವಾರು ಆಪಾದನೆಗಳು ಕೇಳಿ ಬಂದಿವೆ. ಶನಿ ಪೂಜೆಯ ಸಂದರ್ಭದಲ್ಲಿ ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸಮಯದಲ್ಲಿ, ಅನುಮತಿ ಇಲ್ಲದೇ ಮೆರವಣಿಗೆ ಮಾಡುವ ಪ್ರಯತ್ನ ಮಾಡಿ ಸಾಕಷ್ಟು ಕಾರ್ಯಕರ್ತರು ತೊಂದರೆಗೊಳಗಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಕುಕ್ಕಿನಡ್ಕ ದೇವಸ್ಥಾನದ ಬ್ರಹ್ಮಕಲಶದ ಸಮಯದಲ್ಲಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮುಂತಾದ ಸಂದರ್ಭಗಳಲ್ಲಿ ಅವರ ವಿರುದ್ಧ ಹಣಕಾಸಿನ ವಿಚಾರವಾಗಿ ಆಪಾದನೆಗಳು ಕೇಳಿ ಬಂದಿರುತ್ತವೆ. ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಾಲಯದಲ್ಲಿನ ಕಾಣಿಕೆ ಡಬ್ಬಿಯ ವಿಚಾರವಾಗಿ ಅವರ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಈಗಲೂ ಇದೆ. ಧಾರ್ಮಿಕ ಕೇಂದ್ರವಾದ ದೇವಸ್ಥಾನದಲ್ಲಿಯೇ ಹಿಂದೂ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಅವರ ವಿರುದ್ಧ ಇದೆ ಎಂದು ಡಾ. ಎಂ.ಕೆ. ಪ್ರಸಾದ್ ಆರೋಪಿಸಿದರು.
ಹಿಂದೂ ಭಾವನೆಗೆ ಧಕ್ಕೆ:
ಮೃತ್ಯುಂಜಯೇಶ್ವರ ದೇವಾಲಯದಲ್ಲಿ ನಾಗನ ಕಟ್ಟೆಯನ್ನು ಕಟ್ಟುವಾಗ ಆ ಕೆಲಸ ಆಗದಂತೆ ಅದರ ವಿರುದ್ಧ ನ್ಯಾಯಾಲಯದಿಂದ ತಲೆಬಟ್ಟೆ ತಂದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡಿದ್ದಾಗಿದೆ. ಈ ರೀತಿಯಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹಲವಾರು ಆಪಾದನೆಗಳು ಪುತ್ತಿಲರ ವಿರುದ್ದ ಇದೆ ಎಂದರು.
ದೇವಸ್ಥಾನ ಆಣೆ ಮಾಡುವ ಸ್ಥಳವಲ್ಲ:
ಆರೋಪ ಮಾಡುವವರು ದೇವಸ್ಥಾನದ ನಡೆಗೆ ಬರಲಿ ಎಂಬ ಪುತ್ತಿಲ ಹೇಳಿಕೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ, ದೇವರ ಮೇಲೆ ತುಂಬಾ ಭಕ್ತಿ ಇಟ್ಟುಕೊಂಡವನು ನಾನು. ದೇವರ ಎದುರು ಹೋಗಿ, ಪ್ರಾರ್ಥನೆ ಸಲ್ಲಿಸುತ್ತೇನೆಯೇ ಹೊರತು, ಇಂತಹ ವಿಚಾರಗಳಿಗೆ ಆಸ್ಪದ ಕೊಡುವುದಿಲ್ಲ. ಬೇಕಿದ್ದರೆ ಮಳೆ ಬರಲಿ ಎಂದು ಪ್ರಾರ್ಥಿಸುತ್ತೇನೆ. ಆದರೆ ಕ್ಷುಲ್ಲಕ ವಿಚಾರಕ್ಕೆ ದೇವರನ್ನು ಎಳೆದು ತರುವುದು ಸರಿಯಲ್ಲ ಎಂದು ಡಾ. ಎಂ.ಕೆ. ಪ್ರಸಾದ್ ಅಭಿಪ್ರಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಂಭು ಭಟ್, ರಾಜೇಶ್ ಬನ್ನೂರು, ಸಹಜ್ ರೈ ಬಳಜ್ಜ, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.