ಪುತ್ತೂರು: ದೇವಸ್ಥಾನದ ದುಡ್ಡು ಹೊಡೆದ, ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಸಿದ ಅರುಣ್ ಕುಮಾರ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ ಎಂದು ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ನೂತನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದರು.
ಹೆಣ್ಣು ಮಗಳೊಬ್ಬಳು ತನ್ನ ಕಾರಿನಡಿಗೆ ಬಿದ್ದು ಮೃತಪಟ್ಟಾಗ, ತಿರುಗಿ ನೋಡದೇ ಹೋದ ಅರುಣ್ ಪುತ್ತಿಲ ಯಾವ ಹಿಂದುತ್ವವಾದಿ. ಗೋ ಸಾಗಾಟವನ್ನು ಹಿಂದೂ ಕಾರ್ಯಕರ್ತರು ತಡೆದಾಗ, ಆ ತಂಡದಲ್ಲಿ ಅರುಣ್ ಪುತ್ತಿಲ ಕೂಡ ಇದ್ದರು. ಅಷ್ಟಕ್ಕೇ ಅವರೇ ಗೋ ಸಾಗಾಟ ತಡೆದರು ಎಂದು ಹೇಳಲಾಗುತ್ತದೆಯೇ? ಹಿಂದೂಗಳ ವಿರುದ್ಧವೇ ಹೋರಾಟ ಮಾಡಿದ ವ್ಯಕ್ತಿ ಅವರು. ಅಫಿಡವಿಟ್ ನಲ್ಲಿ ಅರುಣ್ ಪುತ್ತಿಲ ಬರೆದ ಸಾಲುಗಳನ್ನು ಗಮನಿಸಿದರೆ ಗೊತ್ತಾಗುತ್ತದೆ, ಆತ ಎಷ್ಟು ದೊಡ್ಡ ಹಿಂದುತ್ವವಾದಿ. ಜಗತ್ತೇ ಬಿಜೆಪಿಯನ್ನು ಹಿಂದುತ್ವವಾದಿ ಪಕ್ಷ ಎಂದು ಕರೆದಿದೆ. ಹಿಂದುತ್ವವಾದಿ ಎಂದರೆ ಬಿಜೆಪಿ ಪಕ್ಷ ಎಂದರು.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡುವುದಾಗ ಕರೆ ಮಾಡಿದಾಗ, ಧಿಕ್ಕರಿಸಿದ ವ್ಯಕ್ತಿ ಪುತ್ತಿಲ. ಈ ಎಲ್ಲಾ ವಿಚಾರ ಕಾರ್ಯಕರ್ತರಿಗೆ ತಿಳಿದಿಲ್ಲ. ತಿಳಿಯುವ ದಿನ ಸದ್ಯದಲ್ಲೇ ಬರಲಿದೆ ಎಂದು ಪ್ರಭಾಕರ ಭಟ್ ತಿಳಿಸಿದರು.
ಪಕ್ಷೇತರರಿಂದ ಯಾವ ನಿರೀಕ್ಷೆಯೂ ಬೇಡ:
ಪಕ್ಷೇತರವಾಗಿ ನಿಂತ ವ್ಯಕ್ತಿ ಏನೂ ಮಾಡಲು ಸಾಧ್ಯವಿಲ್ಲ. ಅಂತಹವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರನ್ನು ಹೇಳೊರಿಲ್ಲ, ಕೇಳೊರಿಲ್ಲ ಎಂಬಂತಾಗುತ್ತದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಿ. ಬಿಜೆಪಿ ಪಕ್ಷವನ್ನು ಬೆಳೆಸುವಂತೆ ಮನವಿ ಮಾಡಿಕೊಂಡರು.