ಪುತ್ತೂರು: ಕೇರಳದ ಕಾಲಡಿಯಲ್ಲಿ ಹುಟ್ಟಿದ ಶಂಕರಾಚಾರ್ಯರು ಸಮಾಜದಲ್ಲಿ ತುಂಬಿದ್ದ ಕರಾಳತೆಯನ್ನು ಮಟ್ಟಹಾಕಲು ಪಣತೊಟ್ಟರು. ಸಮಗ್ರ ಭಾರತವನ್ನು ಅದ್ವೈತ ತತ್ವದಡಿಯಲ್ಲಿ ಒಂದುಗೂಡಿಸಿದರು. ಅವರು ವೈದಿಕ ಸಂಸ್ಕೃತಿಯ ಮೂಲಕ ವೇದಗಳನ್ನು ಹಾಗೂ ಧರ್ಮವನ್ನು ಸಂರಕ್ಷಿಸಿದ ಪರಿ ಅದ್ಭುತವಾದುದು ಎಂದು ವಿದ್ವಾಂಸ ವಿದ್ವಾನ್ ಕೇಶವ ಭಟ್ಟ ಕೇಕಣಾಜೆ ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ತತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೋಮವಾರದಂದು ಆಚರಿಸಲಾದ ಶಂಕರ ಜಯಂತಿ ಹಾಗೂ ವಿಶ್ವ ತತ್ವಜ್ಞಾನಿಗಳ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.
ಶಂಕರಾಚಾರ್ಯರು ಹಲವಾರು ಭಾಷ್ಯಗಳನ್ನು ರಚಿಸಿದ್ದಾರೆ. ಅವರ ಭಾಷ್ಯಗಳು ಸುಲಲಿತವಾದ ಭಾಷೆಯಿಂದ ಕೂಡಿವೆ. ಜತೆಗೆ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ತಿಳಿಸುತ್ತವೆ. ಶಂಕರಾಚಾರ್ಯರು ತಮ್ಮ ವ್ಯಕ್ತಿತ್ವ ಹಾಗೂ ಸಾಧನೆಯಿಂದಾಗಿ ಇಂದು ಸಮಾಜದಲ್ಲಿ ಪೂಜಿಸಲ್ಪಡುತ್ತಿದ್ದಾರೆ ಎಂದರಲ್ಲದೆ ಶಂಕರಾಚಾರ್ಯರು ವಿಶ್ವದ ಮೊದಲ ತತ್ವಜ್ಞಾನಿಗಳು. ತದನಂತರ ಬಂದ ಎಲ್ಲಾ ತತ್ವಜ್ಞಾನಿಗಳು ಶಂಕರಾಚಾರ್ಯರು ನಡೆದ ಹಾದಿಯನ್ನು ಅನುಕರಿಸಿದ್ದಾರೆ ಎಂದರು.
ನಮ್ಮ ಅಂತಃ ಸತ್ವದ ಪರಿಚಯವಾಗಬೇಕಾದರೆ ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕು. ದೇಶ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಬೇಕು. ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು. ಮಾತ್ರವಲ್ಲದೆ, ಆದರ್ಶ ಪುರುಷರ ನಡೆ ನಮ್ಮ ಜೀವನದ ಬದಲಾವಣೆಗೆ ಪ್ರೇರಣೆಯಾಗಬೇಕು. ಅವರ ನುಡಿಗಳು ಜೀವನದಲ್ಲೊಂದು ಹೊಸ ಸ್ಪೂರ್ತಿಯನ್ನು ತುಂಬಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ಸಾಧನಾ ಶಿಖರವನ್ನು ಏರಿದ್ದಾರೆ. ವಿಶ್ವವೇ ಅನುಕರಿಸುವಂತೆ ಬದುಕಿದ್ದಾರೆ. ಇಂದಿನ ಸಮಾಜವುಜಾತಿ, ಧರ್ಮಗಳ ನಡುವೆ ಸಿಲುಕಿ ಛಿದ್ರವಾಗಿದೆ. ಇಂತಹ ವಿಚ್ಛಿದ್ರ ಸಮಾಜವನ್ನು ಒಂದೇ ಸೂತ್ರದಡಿಯಲ್ಲಿ ಜೋಡಿಸಲು ಶಂಕರಾಚಾರ್ಯರು ಮತ್ತೊಮ್ಮೆ ಅವತರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಾ ಪ್ರಾರ್ಥಿಸಿ, ವಿದ್ಯಾರ್ಥಿನಿಯರಾದ ಮಹಿಮಾ, ಅಂಕಿತ, ಪಂಚಮಿ ಶಂಕರಾಚಾರ್ಯ ವಿರಚಿತ ಸೋತ್ರವನ್ನು ಹಾಡಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ವಂದಿಸಿ, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.