ಪುತ್ತೂರು: ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಹಾಗೂ ಸಂತ ಫಿಲೋಮಿನಾ ಕಾಲೇಜು ಸಹಯೋಗದಲ್ಲಿಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿರುವ ಪ್ರಾಥಮಿಕ ಶಾಲಾ ಅಧ್ಯಾಪಕರಿಗೆ 5 ದಿನಗಳ ಇಂಗ್ಲೀಷ್ ಭಾಷಾ ಕಾರ್ಯಗಾರ ಕಾಲೇಜಿನ ಸ್ನಾತಕೋತ್ತರ ವಿಭಾಗ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಸಂಚಾಲಕ ವಂ| ಲಾರೆನ್ಸ್ ಮಸ್ಕರೇನಸ್ ಕಾರ್ಯಕ್ರಮ ಉದ್ಘಾಟಿಸಿ, “ಯಾವುದೇ ವೃತ್ತಿಯಲ್ಲಿ ಯಶಸ್ವಿಯಾಗಲು ನಿರಂತರ ಕಲಿಕೆ ಕನಿಷ್ಠಅವಶ್ಯಕತೆಯಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರು ಸಂವಹನ ಕಲೆಯನ್ನು ಅಭಿವೃದ್ಧಿಪಡಿಸಿಕೊಂಡಲ್ಲಿ ಯಾವುದೇ ವಿಷಯವನ್ನೂವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಬಹುದು ಎಂದರು.
ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ಡಾ| ಆಂಟೊನಿ ಪ್ರಕಾಶ್ ಮೊಂತೆರೋ ಮಾತನಾಡಿ, ಕಲಿಕೆಯು ನಿರಂತರ ಪ್ರಕ್ರಿಯೆಗಿದೆ. ಹೊಸ ವಿಷಯಗಳನ್ನು ಕಲಿತಾಗ ಮಾತ್ರ ಶಿಕ್ಷಕ ಪರಿಣಾಮಕಾರಿಯಾಗಿ ಪಾಠಗಳನ್ನು ಮಾಡಬಹುದು. ಭಾಷೆಯ ಸಮರ್ಪಕ ಬಳಕೆಯಿಂದ ಎಂತಹ ವಿಷಯವನ್ನೂ ಪರಿಣಾಮಕಾರಿಯಾಗಿ ವಿವರಿಸಬಹುದಾಗಿದೆ. ಭಾಷೆಯನ್ನು ಕರಗತಗೊಳಿಸಿಕೊಂಡವನು ಪದಗಳೊಡನೆ ಲೀಲಾಜಾಲವಾಗಿ ಆಡಬಹುದು ಎಂದರು.
ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಂ| ಆಂಟೊನಿ ಮೈಕೆಲ್ ಶೆರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಭದ್ರ ತಳಹದಿಯನ್ನು ಹಾಕುತ್ತಾರೆ. ತಳಹದಿಯು ಸುಭದ್ರವಾಗಿದ್ದಲ್ಲಿ ಯಾವುದೇ ಬಾಹ್ಯಶಕ್ತಿಗೂ ಅಂಜದೆ ಕಟ್ಟಡವು ನೇರವಾಗಿನಿಲ್ಲಬಹುದಾಗಿದೆ. ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂದಿದ್ದಲ್ಲಿ ಶಿಕ್ಷಕರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವುದು ಅತೀಅಗತ್ಯ.ಎಂದರು.
ನಾಗಪ್ರಸಾದ್ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ನೋವೆಲಿನ್ ಡಿಸೋಜ ವಂದಿಸಿದರು. ಉಪನ್ಯಾಸಕಿ ಗೀತಾ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಕ್ಯಾಂಪಸ್ ನಿರ್ದೇಶಕ, ಉಪನ್ಯಾಸಕರೂ ಆದ ವಂ| ಸ್ಟ್ಯಾನಿಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.