ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯ ಕಟ್ಟಿದ ಶ್ರೀಕಾಂತ್ ಬೊಳ್ಳಾ

ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದ ಅಲ್ಲ, ಭರವಸೆಗಳ ಬಲದಿಂದ ಎನ್ನುತ್ತಾರೆ ಶ್ರೀಕಾಂತ್

ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನ ಆಗಿತ್ತು. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಅವರು ಅಂದು ಮಾಡಿದ ಭಾಷಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ.
ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ…
ನಾನು ಹುಟ್ಟಿದ್ದು ಆಂಧ್ರದ ಮಚಲಿಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20 ಸಾವಿರ ರೂಪಾಯಿಗಿಂತ ಕಡಿಮೆ ಇದ್ದ ಕಾಲ ಅದು. ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ತಿರುವುಗಳು ಆರಂಭ ಆದವು.
ಕಲಿಕೆಯಲ್ಲಿ ನಾನು ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ. ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ಅಂಕಗಳು ಬಂದವು.

ಕುರುಡ ಎಂಬ ಕಾರಣಕ್ಕೆ ನೂರಾರು ಅಡ್ಡಿಗಳು
ನನಗೆ ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ. ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ.
ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟು ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆ ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ ಶೇ.98 ಅಂಕಗಳು ಬಂದವು.
ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಪ್ರಯತ್ನ ಕೈ ಬಿಡಲಿಲ್ಲ. ಅಮೆರಿಕದ ನಾಲ್ಕು ಶ್ರೇಷ್ಠ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ನನಗೆ ಆಹ್ವಾನ ನೀಡಿದವು.





































 
 

ಅಮೆರಿಕದ ವಿವಿಯಿಂದ ಪದವಿ
ನಾನು ಅಮೆರಿಕದ ಶ್ರೇಷ್ಠವಾದ ಮಸ್ಸಾಚುಸೆಟ್ಸ್ ವಿವಿಯನ್ನು ನನ್ನ ಅಧ್ಯಯನಕ್ಕೆ ಆರಿಸಿಕೊಂಡೆ. ಅಮೆರಿಕದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ. ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗ್‌ನಲ್ಲಿ ವಿವಿಯ ದಾಖಲೆ ಕೂಡ ಮಾಡಿದ್ದೆ. ಆಗ ಅಮೆರಿಕದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು. ಆದರೆ ಅದೆಲ್ಲವನ್ನೂ ಬಿಟ್ಟು ನಾನು ಭಾರತಕ್ಕೆ ಬಂದೆ.

ಏಕೆಂದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು
2011ರಲ್ಲಿ ನಾನು ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹುವಿಕಲತೆಯ ಮಕ್ಕಳಿಗಾಗಿ ‘ಸಮನವೈ ಸೆಂಟರ್’ ಎಂಬ ಸೇವಾಸಂಸ್ಥೆಯನ್ನು ಆರಂಭಿಸಿದೆ. ಬ್ರೈಲ್ ಲಿಪಿಯ ಪ್ರಿಂಟಿಂಗ್ ಪ್ರೆಸ್‌ ತೆರೆದೆ. 3ಸಾವಿರ ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

2011ರಲ್ಲಿ ಬೊಳ್ಳಂಟ್ ಇಂಡಸ್ಟ್ರಿ ಆರಂಭ
ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಹೆಚ್ಚು ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು.
ನಾನು ಕಂಪನಿ ಮಾಡುವ ವಿಷಯ ನಾಡಿನ ಉದ್ದಗಲಕ್ಕೂ ಹರಡಿತು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಅಲ್ಲಿಂದ ನನ್ನ ಬದುಕಿನ ಗತಿಯೇ ಬದಲಾಯಿತು.
ಆ ಕಂಪನಿಯು ಪ್ರತಿ ತಿಂಗಳು ಶೇ.20 ಪ್ರಗತಿ ದಾಖಲಿಸುತ್ತಾ ಬಂತು. ಇಂದು ನನ್ನ ಕಂಪನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳಿವೆ. 130 ಕೋಟಿ ರೂ.ಗೂ ಅಧಿಕ ವಾರ್ಷಿಕ ಟರ್ನ್ ಓವರ್ ಇದೆ. ನನ್ನ ಕಂಪನಿ ನೂರಕ್ಕೆ ನೂರರಷ್ಟು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರ ಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿಯಾದ ಬದುಕಿನ ಅವಕಾಶ ನೀಡಿದ ಖುಷಿ ಇದೆ.
ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡ್‌ತೀ ಹೈ ಪಂಖೋ ಕೀ ತಾಕತ್ ಸೆ ನಹೀಂ, ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಕೋಟ್‌ನ ಜತೆಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಉದ್ಯಮದಲ್ಲಿ ಭಾರಿ ದೊಡ್ಡ ಯಶಸ್ಸು ಅವರದ್ದು
ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜಿನ್ 2017ರಲ್ಲಿ ನಡೆಸಿದ ಏಷ್ಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.
‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ9 ನವ ನಕ್ಷತ್ರ ಪ್ರಶಸ್ತಿ’ ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ಈಗಾಗಲೇ ದೊರೆತಿವೆ. ಶ್ರೀಕಾಂತ್ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ. ಇನ್ನೂ 31 ವರ್ಷದ ಶ್ರೀಕಾಂತ್ ಹೈದರಾಬಾದಿನಲ್ಲಿ ಒಬ್ಬ ಅದ್ಭುತವಾದ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಶುಭವಾಗಲಿ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top