ಪುತ್ತೂರು: ಸೇವೆ ಎನ್ನುವ ಪರಿಕಲ್ಪನೆ ಅತ್ಯಂತ ಅದ್ಭುತವಾದುದು. ದೇಶದ ಆದರ್ಶವೇ ಸೇವೆ ಮತ್ತು ಸಮರ್ಪಣೆ. ಪರಸ್ಪರ ಸಹಕಾರ, ಸೌಹಾರ್ಧತೆಯೇ ದೇಶದ ಏಳಿಗೆಗೆ ಸಹಕಾರಿ ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇದರ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಹೇಳಿದರು.
ಇವರು ಮಂಗಳೂರು ವಿಶ್ವವಿದ್ಯಾಲಯ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಮತ್ತು ಕೇಪು ಕೈಲಾಸೇಶ್ವರ ದೇವಾಲಯದ ಆಶ್ರಯದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯದೊಂದಿಗೆ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೇಪು ಶಿವಕ್ಷೇತ್ರದ ಮುಖ್ಯಸ್ಥರವೀಶ್ ಕೆ.ಎನ್. ಮಾತನಾಡಿ, ಮಾನವ ಕೇವಲ ನಿಮಿತ್ತ ಮಾತ್ರ. ಉಳಿದದ್ದೆಲ್ಲವೂ ಭಗವಂತನ ಇಚ್ಛೆ. ರಾಷ್ಟ್ರೀಯ ಸೇವಾ ಯೋಜನೆಯು ಹತ್ತಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಸ್ವಯಂ ಸೇವಕತನ ಸಮಯ ಪಾಲನೆ, ಹಾಗೂ ಜೀವನದ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅವರು ರಾಷ್ಟ್ರೀಯ ಸೇವಾ ಶಿಬಿರ ಶಿಬಿರಾರ್ಥಿಗಳಿಗೆ ಬದುಕಿನ ಮೌಲ್ಯವನ್ನು ತಿಳಿಸಿಕೊಡುತ್ತದೆ. ಪರಸ್ಪರ ಒಡನಾಟ, ಸೇವಾ ಮನೋಭಾವ ಬಾಂಧವ್ಯವನ್ನು ವೃದ್ದಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳಿ ಎಂದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ವಿಶೇಷಾಧಿಕಾರಿ ಡಾ. ಶ್ರೀಧರ ನಾಯಕ್, ರಾಷ್ಟ್ರೀಯ ಯೋಜನಾಧಿಕಾರಿ ಡಾ. ಅರುಣ್ ಪ್ರಕಾಶ್, ವಿಯಾ ಕೆ.ಎನ್. ಉಪಸ್ಥಿತರಿದ್ದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವಿಷ್ಣು ಕುಮಾರ್ ವಂದಿಸಿ, ಯೋಜನಾಧಿಕಾರಿ ವಿದ್ಯಾ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು.