ಏ. 29 ರಂದು ಮಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ
ಉಡುಪಿ : ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಕರಾವಳಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಮೂಲ್ಕಿಯಲ್ಲಿ ಪ್ರಧಾನಿಯ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೆಣವ ಹೇಳಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸೇರಿಸಿ ಒಂದೇ ಸಾರ್ವಜನಿಕ ಸಭೆ ನಡೆಯಲಿದೆ. ಹೀಗಾಗಿ ಮಧ್ಯದಲ್ಲಿರುವ ಮೂಲ್ಕಿಯನ್ನು ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಮೋದಿ ಸಮಾವೇಶಕ್ಕಾಗಿ ಬಿಜೆಪಿ ಈಗಾಗಲೇ ತಯಾರಿ ಪ್ರಾರಂಭಿಸಿದೆ. ಮೋದಿ ಆಗಮನಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರು ಮತ್ತು ಉಡುಪಿಗೆ ಭೇಟಿ ನೀಡಲಿದ್ದಾರೆ. ಏ.29ರಂದು ಮಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ ನಡೆಯಲಿದೆ. ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಅಂದೇ ಮಡಿಕೇರಿಯಲ್ಲೂ ಶಾ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಏ.29ರಂದು ಸಂಜೆ 4ಕ್ಕೆ ಕೊಟ್ಟಾರದಿಂದ ಅಮಿತ್ ಶಾ ರೋಡ್ ಶೋ ಪ್ರಾರಂಭವಾಗಲಿದೆ. ಬಳಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮೋದಿ ಮತ್ತು ಶಾ ಭೇಟಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಪ್ರಧಾನಿಯಾಗಿ ದೇಶದ ಎಲ್ಲಿಗೆ ಬೇಕಾದರೂ ಹೋಗುವ ಅಧಿಕಾರ ಮೋದಿಗಿದೆ. ಅದಕ್ಕೆ ಕಾಂಗ್ರೆಸ್‌ನವರ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಏನೂ ಅಲ್ಲದ, ಸಂಸತ್ ಸದಸ್ಯ ಸ್ಥಾನವನ್ನೂ ಕಳೆದುಕೊಂಡಿರುವ ರಾಹುಲ್ ಗಾಂಧಿಯನ್ನು ಕರೆತಂದು ಪ್ರಚಾರ ಮಾಡಿಸುತ್ತಿರುವುದು ಏಕೆ ಎಂಬುದಕ್ಕೆ ಉತ್ತರ ಕೊಡಲಿ ಎಂದು ಹೇಳಿದ್ದಾರೆ.