ಮುಂಬಯಿ-ಮಂಗಳೂರು ರೈಲಿನಲ್ಲಿ ನಡೆದ ಮನಕಲಕುವ ಘಟನೆ
ಮಂಗಳೂರು : ರೈಲಿನಲ್ಲಿ ಮೃತಪಟ್ಟ ವ್ಯಕ್ತಿಯ ಶವ ಮುಂಬಯಿಯಿಂದ ಮಂಗಳೂರು ತನಕ ಬಂದು ವಾಪಸು ಮುಂಬಯಿಗೆ ಹೋದ ಘಟನೆ ಮುಂಬಯಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಭವಿಸಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನಾಪತ್ತೆಯಾಗಿದ್ದಾರೆಂದು ಭಾವಿಸಿ ಈ ವ್ಯಕ್ತಿಯ ಮನೆಯವರು ಮಂಗಳೂರು ಮತ್ತು ಮುಂಬಯಿಯಲ್ಲಿ ಹಲವು ನಿಲ್ದಾಣಗಳಲ್ಲಿ ಹುಡುಕಾಡಿದ್ದರು. ರೈಲಿನ ಸಿಬ್ಬಂದಿ ಕೂಡ ಇಡೀ ರೈಲನ್ನು ಹುಡುಕಾಡಿ ರೈಲಿನಲ್ಲಿ ಪತ್ತೆಯಾಗಿಲ್ಲ ಎಂದು ವರದಿ ನೀಡಿದ್ದರು. ಆದರೆ ಶವ ಭರ್ತಿ 24 ತಾಸು ಶೌಚಾಲಯದ ಒಳಗೆ ಇತ್ತು.
ಕಿನ್ನಿಗೋಳಿಯ ಮೆನ್ನಬೆಟ್ಟಿನ ಮೋಹನ್ ಬಂಗೇರ (56) ಎಂಬವರು ರೈಲಿನಲ್ಲಿ ತೀರಿಕೊಂಡ ನತದೃಷ್ಟ ವ್ಯಕ್ತಿ. ಮುಂಬಯಿಯಿಂದ ಊರಿಗೆ ಬರುವಾಗ ರೈಲಿನ ಎಸಿ ಬೋಗಿಯ ಶೌಚಾಲಯದಲ್ಲಿ ಹೃದಯಾಘಾತವಾಗಿ ಅವರು ತೀರಿಕೊಂಡಿದ್ದರು. ದೇಹಬಾಧೆ ತೀರಿಸಲು ಶೌಚಾಲಯದ ಒಳಗೆ ಹೋದ ಅವರು ಚಿಲುಕ ಹಾಕಿದ ಕಾರಣ ಉಳಿದ ಪ್ರಯಾಣಿಕರಿಗೂ ಅವರು ಒಳಗಿರುವ ವಿಷಯ ತಿಳಿದಿರಲಿಲ್ಲ. ಹೀಗಾಗಿ ಹೃದಯಾಘಾತವಾದ ಅವರು ಶೌಚಾಲಯದಲ್ಲೇ ಬಾಕಿಯಾಗಿದ್ದಾರೆ.
ಮೋಹನ್ ಬಂಗೇರ ಅವರಿಗಾಗಿ ಮನೆಯವರು ಮುಂಬಯಿವರೆಗೂ ಹುಡುಕಾಡಿದ್ದಾರೆ. ಆದರೆ ಅವರಿದ್ದ ಬೋಗಿಯ ಶೌಚಾಲಯ ಸಹಿತ ಕೊಳೆತುಹೋದ ಮೃತದೇಹ ತಪಾಸಣೆ ಮಾಡಬೇಕಿದ್ದ ರೈಲು ಸಿಬಂದಿ ಕರ್ತವ್ಯಲೋಪ ಮಾಡಿದ್ದಲ್ಲದೆ ತಾವು ತಪಾಸಣೆ ಮಾಡಿದ್ದಾಗಿ ವರದಿ ಕೊಟ್ಟು ಕೈತೊಳೆದುಕೊಂಡಿದ್ದರು.
ಮೃತದೇಹವನ್ನು ರೈಲಿನಲ್ಲೇ ಮತ್ತೆ ಹಿಂದೆ ಕಳುಹಿಸಲು, ಮರಣೋತ್ತರ ಪರೀಕ್ಷೆಗೆ 10 ಸಾವಿರ ರೂ.ಗಳನ್ನು ಪಾವತಿಸಿದ್ದು ಏಜೆನ್ಸಿಯೊಂದು ಪ್ಯಾಕ್ ಮಾಡಿ ಕಳಿಸಿದೆ. ಆದರೆ ಪಾರ್ಸೆಲ್ ಇಲ್ಲಿಗೆ ಬರುವಾಗ ದೇಹ ಪೂರ್ಣ ಕೊಳೆತು ದುರ್ವಾಸನೆ ಬೀರುತ್ತಿತ್ತು.
ಎಸಿ ಬೋಗಿಯಲ್ಲಿ ಸಂಚರಿಸುವವರಿಗೆ ಇಂತಹ ದುಃಸ್ಥಿತಿಯಾದರೆ ಹೇಗೆ? ರೈಲು ಸಿಬಂದಿ ನಿರ್ಲಕ್ಷದಿಂದ ಹೀಗಾಗಿದೆ. ಇದಕ್ಕಾಗಿ ಪರಿಹಾರ ನೀಡಬೇಕೆಂದು ಮನೆಯವರು ದೂರು ಸಲ್ಲಿಸಿದ್ದಾರೆ. ಮೋಹನ್ ಬಂಗೇರ ಹಲವು ವರ್ಷಗಳಿಂದ ಮುಂಬಯಿನಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರು ಕಿನ್ನಿಗೋಳಿಯ ಮನೆಯಲ್ಲಿದ್ದಾರೆ.
ಮುಂಬಯಿಯಿಂದ ಮೋಹನ್ ಬಂಗೇರ ಎ. 18ರ ಮುಂಬಯಿ ಸಿಎಸ್‌ಟಿ ಮಂಗಳೂರು ಜಂಕ್ಷನ್ ರೈಲಿನ ಬಿ-3 ಕೋಚ್‌ನಲ್ಲಿ ಪ್ರಯಾಣಿಸಿದ್ದರು. ಅವರನ್ನು ಕರೆದೊಯ್ಯಲು ಸೋದರ ಹಾಗೂ ಇತರರು ಸುರತ್ಕಲ್‌ನಲ್ಲಿ ಕಾಯುತ್ತಿದ್ದರು. ಆಗ ಮೋಹನ್ ಬಂಗೇರ ಅವರು ರೈಲಿನಲ್ಲಿ ನಾಪತ್ತೆಯಾದ ವಿಚಾರ ಅವರಿಗೆ ರೈಲಿನ ಟಿಟಿಇ ಮೂಲಕ ಫೋನ್‌ನಲ್ಲಿ ಲಭಿಸಿತು. ಅವರ ಬ್ಯಾಗ್, ಪರ್ಸ್ ಮತ್ತು ಮೊಬೈಲ್ ಕುಳಿತಿದ್ದ ಜಾಗದಲ್ಲೇ ಇತ್ತು.
ಟಿಟಿಇಯಲ್ಲಿ ಈ ಕುರಿತು ಮಾತನಾಡಿದಾಗ, ಅವರು ಮೋಹನ್ ಬಂಗೇರರು ಕಂಕಾವಳಿ ಅಥವಾ ಮಡಗಾಂವ್‌ನಲ್ಲಿ ಇಳಿದು ಹೋದಂತಿದೆ, ಅಲ್ಲಿಯ ಸಿಸಿಟಿವಿ ಫೂಟೇಜ್ ನೋಡಿದರೆ ಗೊತ್ತಾಗಬಹುದು ಎಂದಿದ್ದರು. ಬಳಿಕ ಮೋಹನ್ ಕುಟುಂಬದವರು ಮಂಗಳೂರು ಜಂಕ್ಷನ್‌ಗೆ ತೆರಳಿ ಅಲ್ಲಿನ ಅಧಿಕಾರಿಗಳ ಸಲಹೆಯಂತೆ ರೈಲ್ವೇ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಈ ನಡುವೆ ಮುಂಬಯಿಯಲ್ಲಿರುವ ಸಂಬಂಧಿಕರೂ ಹಲವು ಸ್ಟೇಷನ್‌ಗಳಲ್ಲಿ ಸಿಸಿಟವಿ ದೃಶ್ಯಾವಳಿ ಪರಿಶೀಲನೆ ನಡೆಸಿದರೂ ಎಲ್ಲೂ ಪತ್ತೆಯಾಗಲಿಲ್ಲ. ಮರುದಿನ ಮೋಹನ್ ಅವರ ಅಣ್ಣ ರಾಮ ಬಂಗೇರ ಅವರಿಗೆ ಮುಂಬಯಿ ಸಿಎಸ್‌ಟಿ ಸ್ಟೇಷನ್‌ನಿಂದ ಟಿಟಿಇ ಕರೆ ಮಾಡಿದ್ದು ಮೃತದೇಹ ರೈಲಿನ ಟಾಯ್ಲೆಟ್‌ನಲ್ಲಿ ಪತ್ತೆಯಾಗಿರುವುದನ್ನು ತಿಳಿಸಿದ್ದರು.