ಮಂಗಳೂರು : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಮಂಗಳೂರಿಗೆ ಆಗಮಿಸಿದ್ದು, ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾವು 150 ಸೀಟ್ ಗೆಲ್ಲಬೇಕಾಗಿದೆ. ಕಡಿಮೆ ಸೀಟ್ ಗೆದ್ದಲ್ಲಿ ಶಾಸಕರನ್ನು ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಕಳ್ಳ ಮಾರ್ಗದಲ್ಲಿ ಸರ್ಕಾರ ರಚಿಸುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಕಾಂಗ್ರೆಸ್ ಪಡೆಯುವುದು ಅಗತ್ಯ ಎಂದರು. ಕರ್ನಾಟಕ, ಮಧ್ಯಪ್ರದೇಶ, ಗೋವಾ, ಮಣಿಪುರಾ, ಉತ್ತರಖಂಡದಲ್ಲಿ ಶಾಸಕರ ಕಳ್ಳತನದಿಂದ ಸರಕಾರ ರಚನೆಯಾಗಿದೆ. ಆಮದು ಮಾಡಿಕೊಂಡ ಶಾಸಕರನ್ನ ಬಿಜೆಪಿ ವಾಷಿಂಗ್ ಮೆಷೀನ್ ಗೆ ಹಾಕಿದ್ರೆ ಅವರು ಕ್ಲೀನ್ ಆಗ್ತಾರೆ ಎಂದು ವ್ಯಂಗ್ಯವಾಡಿದರು.
ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಧುಗಳು ಯಾಕೆ ರಾಜಕೀಯಕ್ಕೆ ಬರಬೇಕು ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿ, ಮುಖ್ ಮೆ ರಾಮ್ ಬಗಲ್ ಮೆ ಚೂರಿ ಇರಬಾರದು ಎಂದರು. ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದ ಖರ್ಗೆ ನಿಮ್ಮ ಎದೆ ಮೇಲೆ ಕೈ ಇಟ್ಟು ಹೇಳಿ ದೇಶದಲ್ಲಿ ಸಂವಿಧಾನ ಅಪಾಯದಲ್ಲಿಲ್ವಾ ಎಂದು ಸುದ್ದಿಗಾರರನ್ನು ಪ್ರಶ್ನಿಸಿದ ಖರ್ಗೆ ಬಿಜೆಪಿ ವಿರುದ್ಧ ಸುದ್ದಿ ಮಾಡಿದ್ರೆ ನಿಮ್ಮ ಮಾಧ್ಯಮ ಬಂದ್ ಆಗುತ್ತದೆ ಎಂದರು.
ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಮಂಗಳೂರಿಗೆ ಬಂದಿದ್ದೇನೆ. ಈ ಚುನಾವಣೆ ಕರ್ನಾಟಕದ ಜನರಿಗೆ ಬಹಳ ಮುಖ್ಯ. ಸದ್ಯದ ಪರಿಸ್ಥಿತಿ ಅವಲೋಕನ ಮಾಡಿದಾಗ ಪ್ರಜಾಪ್ರಭುತ್ವ ಅಸ್ತಿತ್ವ ಇದೆಯೋ ಇಲ್ಲವೂ ಎಂಬ ಪ್ರಶ್ನೆ ಕಾಡಿದೆ. ಸಂವಿಧಾನ ನಮ್ಮನ್ನ ರಕ್ಷಣೆ ಮಾಡುತ್ತಿದೆಯೋ ಇಲ್ಲವೋ ಎಂಬ ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಈ ಚುನಾವಣೆ ಜನತೆಗೆ ಮಹತ್ವವಾದ ಚುನಾವಣೆ. ಇಲ್ಲಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನಾವು ಮಾತಾನಾಡಬೇಕಿದೆ, ಇವತ್ತು ಕರ್ನಾಟಕದಲ್ಲಿ ಯಾವುದೇ ಕೆಲಸಕ್ಕೆ ಲಂಚ ಕೊಡದೆ ಕೆಲಸ ಆಗೋದಿಲ್ಲವೆಂಬ ಅಭಿಪ್ರಾಯ ಮೂಡಿದೆ. ಕರ್ನಾಟಕ ಸರಕಾರ ತನ್ನ ಆಡಳಿತ, ಸೇವೆಯಿಂದ ಹೆಸರುವಾಸಿಯಾಗಿತ್ತು. ಆದರೆ ಅದನ್ನ ನಾವು ಕಳೆದುಕ್ಕೊಂಡಿದ್ದೇವೆ. 40% ಕಮಿಷನ್ ಕೊಟ್ರೆ ಎಲ್ಲಾ ಕೆಲಸ ಆಗುತ್ತದೆ ಎಂದರು. ಪ್ರಧಾನಿಗಳಿಗೆ ಭ್ರಷ್ಟಾಚಾರದ ಬಗ್ಗೆ ದೂರು ಕ್ರಮಕೈಗೊಂಡಿಲ್ಲ ಎಂದರು. ಮೋದಿಜಿಯವರು ಯಾವಾಗ್ಲೂ ಮೆನಾ ಕಾವುಂಗ ನಾ ಕಾನೆ ದೊಂಗ ಇದು ಅವರ ಸ್ಲೋಗನ್, ಆದ್ರೆ ಮೋದಿ ಯಾಕೆ ಸುಮ್ಮನಿದ್ದಾರೆ. ಅವರ ಕಡೆ ಎಂಎಲ್ಎಗಳನ್ನ ಸೆಳೆದುಕೊಳ್ಳಬೇಕಾದ್ರೆ ಇಡಿ ಐಟಿ ಯೆಂದು ಅಸ್ತ್ರಗಳನ್ನ ಉಪಯೋಗ ಮಾಡ್ತಾರೆ. ಈ ಬಗ್ಗೆ ಯಾಕೆ ಮಾತಾಡಲ್ಲ. ನಮ್ಮ ರಾಜ್ಯದಲ್ಲಿ 25 ಲಕ್ಷ ನಿರುದ್ಯೋಗಿಗಳಿದ್ದಾರೆ. ಅವರಿಗೆ ನೌಕರಿ ಸಿಕ್ಕಿಲ್ಲ. ಸುಮಾರು 3 ಕೋಟಿ ಜನ ವಿದ್ಯಾವಂತ ನಿರುದ್ಯೋಗಿಗಳು ಇದ್ದಾರೆ ಎಂದು ಹೇಳಿದರು.