ರಾಜಕೀಯ ಪಂಡಿತರ ಅಂದಾಜಿಗೂ ನಿಲುಕುತ್ತಿಲ್ಲ ಚುನಾವಣಾ ಕಣ
ಬೆಂಗಳೂರು : ಮತದಾನಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದರೂ ಚುನಾವಣಾ ಕಣದಲ್ಲಿ ದಿನದಿನಕ್ಕೂ ಟ್ರೆಂಡ್ ಬದಲಾಗುತ್ತಿದೆ. ಈ ಸಲದ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಂದಾಜಿಸಲು ರಾಜಕೀಯ ವಿಶ್ಲೇಷಕರು ಕೂಡ ತಿಣುಕಾಡುತ್ತಿದ್ದಾರೆ. ಮೊದಲೆಲ್ಲ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್ ಯಾವ ರೀತಿ ಇದೆ ಎಂಬ ಒಂದು ಅಂದಾಜು ಸಿಗುತ್ತಿತ್ತು. ಕೆಲವೊಂದಿಷ್ಟು ಸಮೀಕ್ಷೆಗಳು ಕೂಡ ಈ ಸಲ ಯಾವ ಪಕ್ಷ ಬಹುಮತ ಪಡೆಯಬಹುದು ಎಂದು ಅಂದಾಜಿಸಲು ನೆರವಾಗುತ್ತಿದ್ದವು. ಆದರೆ ಈ ಸಲ ಬಹುತೇಕ ಸಮೀಕ್ಷೆಗಳ ಅಂಕಿಸಂಶಗಳು ಕೂಡ ಅತ್ತಂದಿತ್ತ ಹೊಯ್ದಾಡುತ್ತಿವೆ.
224 ಕ್ಷೇತ್ರಗಳ ಪೈಕಿ ಸುಮಾರು 200 ಕ್ಷೇತ್ರಗಳಲ್ಲಿ ಭಾರಿ ತುರುಸಿನ ಹಣಾಹಣಿ ಏರ್ಪಟ್ಟಿರುವುದೇ ಇದಕ್ಕೆ ಕಾರಣ. ಪಕ್ಷಗಳ ಆಂತರಿಕ ಸಮೀಕ್ಷೆಗಳು ಕೂಡ ಈ ಸಲದ ಟ್ರೆಂಡ್ ಅನ್ನು ನಿಖರವಾಗಿ ಅಂದಾಜಿಸಲು ವಿಫಲವಾಗಿವೆ. ನಾಯಕರು ನಮಗೇ ಬಹುಮತ ಎಂದು ಹೇಳುತ್ತಿದ್ದರೂ ಅವೆಲ್ಲ ಮತದಾರರಲ್ಲಿ ವಿಶ್ವಾಸ ಹುಟ್ಟಿಸಲು ನೀಡುವ ಹೇಳಿಕೆಗಳಷ್ಟೆ. ಯಾರು ಕೂಡ ನಾವು ಗೆದ್ದು ಸರಕಾರ ರಚಿಸುತ್ತೇವೆ ಎಂದು ಎದೆತಟ್ಟಿಕೊಂಡು ಹೇಳುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ವಾಸ್ತವ. ರಾಜಕೀಯ ಪಕ್ಷಗಳಿಗೆ ಮತದಾರನ ಮನದಾಳಕ್ಕಿಯಲು ಸಾಧ್ಯವಾಗದಿರುವುದೇ ಈ ಅನಿಶ್ಚಿತತೆಗೆ ಕಾರಣ. ಕೆಲವು ಕ್ಷೇತ್ರಗಳಲ್ಲಿ ಟ್ರೆಂಡ್ ಅಂದಾಜಿಗೆ ನಿಲುಕುತ್ತಾದರೂ ಒಟ್ಟಾರೆ ರಾಜ್ಯದ ಫಲಿತಾಂಶ ಯಾವ ಕಡೆ ವಾಲಬಹುದು ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ಸಾಕಷ್ಟು ಏಜೆನ್ಸಿಗಳು ಮತ್ತು ವಾಹಿನಿಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿವೆ. ಅವೆಲ್ಲ ಒಂದೊಂದು ರೀತಿಯ ಫಲಿತಾಂಶವನ್ನು ನೀಡಿವೆ. ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎನ್ನುವುದು ಬಿಟ್ಟರೆ ಬೇರೆ ಯಾವ ಅಂಶಗಳೂ ಈ ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿಲ್ಲ. ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕನ್ನಡ ವಾಹಿನಿಯ ‘ಮೆಗಾ ಸರ್ವೇ’ ವರದಿ ಬಿಡುಗಡೆಯಾಗಿದೆ. ಇಲ್ಲಿ ಫಲಿತಾಂಶ ಮತ್ತೊಮ್ಮೆ ಬುಡಮೇಲಾಗುವ ಮುನ್ಸೂಚನೆ ಸಿಕ್ಕಿದೆ. ಹಿಂದಿನ ಸಮೀಕ್ಷೆಗಳ ಪೈಕಿ ಕೆಲವು ಕಾಂಗ್ರೆಸ್ ಬಹುಮತ ಪಡೆಯುತ್ತದೆ ಅಥವಾ ಬಹುಮತದ ಸಮೀಪಕ್ಕೆ ಬರುತ್ತದೆ ಎಂದು ಅಂದಾಜಿಸಿದ್ದರೆ ಪಬ್ಲಿಕ್ ಟಿವಿ ಕಳೆದ ಬಾರಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಈ ಸಲ ಮುನ್ನಡೆ ಸಾಧಿಸಲಿದ್ದು, ಅತ್ಯಧಿಕ ಸ್ಥಾನ ಪಡೆಯಲಿದೆ ಎಂದು ಹೇಳುತ್ತಿದೆ.
ಏನು ಹೇಳುತ್ತಿದೆ ಸಮೀಕ್ಷೆ?
2018ರಲ್ಲಿ ಕೇವಲ 80 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್ ಈ ಬಾರಿ 92-102 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸರ್ವೇ ಹೇಳುತ್ತಿದೆ. ಕಳೆದ ಬಾರಿ 104 ಸ್ಥಾನ ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಈ ಸಲ ಕೇವಲ 83-90 ಸೀಟು ದಕ್ಕಲಿದೆ. ಜೆಡಿಎಸ್ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ತುಸು ಕಡಿಮೆ ಕ್ಷೇತ್ರಗಳನ್ನು ಗಳಿಸಲಿದೆ. ಜೆಡಿಎಸ್ 2018ರಲ್ಲಿ 37 ಸ್ಥಾನ ಪಡೆದಿದ್ದು, ಈ ಚುನಾವಣೆಯಲ್ಲಿ 29-34 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಉಳಿದಂತೆ ಇನ್ನಿತರ ಪಕ್ಷಗಳು 2ರಿಂದ 4 ಸ್ಥಾನಗಳ್ನು ಹೊಂದಲಿವೆ ಎಂದು ಮೆಗಾ ಸರ್ವೇ ತಿಳಿಸಿದೆ.
ಮತದಾರನ ಮನದಾಳಲ್ಲೇನಿದೆ?
ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಇರುವುದು ನಿಚ್ಚಳ. ಆದರೆ ಇದನ್ನು ಬಹುಮತವಾಗಿ ಪರಿವರ್ತಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುವುದಿಲ್ಲ ಎಂಬುದುನ್ನು ಈ ಸಮೀಕ್ಷೆ ತಿಳಿಸುತ್ತದೆ. ಅರ್ಥಾತ್ ಈ ಸಲವೂ ರಾಜ್ಯದಲ್ಲಿ ಅತಂತ್ರ ಸ್ಥಿತಿ ಏರ್ಪಡಲಿದೆ. ಸರಕಾರ ರಚಿಸಬೇಕಾದರೆ ಆಪರೇಷನ್, ಹೊಂದಾಣಿಕೆಯಂಥ ತಂತ್ರಗಳನ್ನು ಮಾಡಬೇಕಾಗುತ್ತದೆ ಎಂಬ ಅಂಶ ಈ ಸರ್ವೇಯಲ್ಲಿ ವ್ಯಕ್ತವಾಗುತ್ತದೆ.
ಹೀಗಿದ್ದರೂ ಸದ್ಯ ಭರ್ಜರಿ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು 120ರಿಂದ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಸಹ ತಾನು ಈ ಬಾರಿ ಪ್ರಬಲ ಪಕ್ಷವಾಗಿ ಹೊರ ಹೊಮ್ಮುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ. ಸಮೀಕ್ಷೆಗಳು ಏನೇ ಫಲಿತಾಂಶ ನೀಡಿದರೂ ಅಂತಿಮವಾಗಿ ರಾಜ್ಯದ ಭವಿಷ್ಯ ನಿರ್ಧರಿಸುವುದು ಮತದಾರ. ಅವನ ಮನಸ್ಸಿನಾಳದಲ್ಲಿ ಯಾವ ನಿರ್ಧಾರ ರೂಪುಗೊಂಡಿದೆ ಎನ್ನುವುದನ್ನು ತಿಳಿಯಲು ಮೇ 13ರ ತನಕ ಕಾಯಬೇಕು.