ಪುತ್ತೂರು: ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾಷ್ಬಬಂಧ ಬ್ರಹ್ಮಕಲಶೋತ್ಸವ ಏ.29 ರಿಂದ ಮೇ 7 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಶ್ರೀ ದೇವಸ್ಥಾನ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಜೀರ್ಣೋದ್ಧಾರದ ಕುರಿತು ಸ್ವರ್ಣಪ್ರಶ್ನೆಯಲ್ಲಿ ಚಿಂತನೆ ನಡೆಸಲಾಯಿತು. ಅದಂತೆ ಇದೀಗ ಊರ, ಪರವೂರ ಭಕ್ತಾದಿಗಳು ಹಾಗೂ ಬೆಳ್ಳಿಪ್ಪಾಡಿ ಮನೆತನದವರು ಸೇರಿ ಶಿಥಿಲಾವಸ್ಥೆಯಲ್ಲಿದ್ದ, ಇಂದಿಗೂ ಚೈತನ್ಯಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಸುಮಾರು ಒಂದೂ ಕೋಟಿಗೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಏ.29 ರಂದು ಬೆಳಿಗ್ಗೆ 9.30 ಕ್ಕೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಊರ, ಪರವೂರ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಮಧ್ಯಾಹ್ನ 12 ಕ್ಕೆ ಮಹಾಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಳ್ಳಿಪ್ಪಾಡಿ ವಿಶ್ವನಾಥ ರೈ ಉಗ್ರಾಣ ಕೊಠಡಿ, ಕೆ.ಪಿ.ಗೌಡ ಕೂಟೇಲು ಕಾರ್ಯಾಲಯ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಹೊರೆಕಾಣಿಕೆ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾ ಪಾಕಶಾಲೆಯನ್ನು ಉದ್ಘಾಟಿಸುವರು.
ಏ.30 ರಿಂದ ಮೇ4 ರನತಕ ಬೆಳಿಗ್ಗೆ 9 ಗಂಟೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮೇ 4 ರಂದು ಬೆಳಿಗ್ಗೆ 5 ರಿಂದ ಮಹಾಗಣಪತಿ ಹೋಮ, ಅಲ್ಪಪ್ರಾಸಾದಶುದ್ಧಿ, ಪ್ರಾಸಾದಪ್ರತಿಷ್ಠೆ, ನಾಂದೀ ಪುಣ್ಯಾಃ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಬೆಳಿಗ್ಗೆ 7.45 ರಿಂದ 8.54 ರ ವರೆಗೆ ನಡೆಯುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಸಕಲೇಶ್ವರ ದೇವರ ಪುನಃಪ್ರತಿಷ್ಠೆ, ಗಣಪತಿ ದೇವರ ಪ್ರತಿಷ್ಠೆ, ಅಷ್ಟಬಂಧಕ್ರಿಯೆ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರಪ್ರತಿಷ್ಠೆ, ಧೂಮಾವತಿ ದೈವದ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಪ್ರತಿಷ್ಠಾ ಬಲಿ, ಬ್ರಾಹ್ಮಣ ಹಸ್ತೋದಕ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ಜರಗಲಿದೆ.
ಮೇ 5 ರಿಂದ 6 ರ ತನಕ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಮೇ.7 ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಆಶ್ಲೇಷಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ ಜರಗಲಿದೆ. ರಾತ್ರಿ 7.30 ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಳಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಮೇ 8 ರಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೇಶವ ಭಂಡಾರಿ ಕೈಪ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಗೌಡ ಪಮ್ಮನಮಜಲು, ಮೋಹನ್ ಪಕ್ಕಳ ಉಪಸ್ಥಿತರಿದ್ದರು.