ಲಿಂಗಾಯತರು ಭ್ರಷ್ಟರು ಹೇಳಿಕೆ ವಿರುದ್ಧ ಸಮುದಾಯದವರ ಆಕ್ರೋಶ
ಬೆಂಗಳೂರು : ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿರುವ ಸಿದ್ದರಾಮಯ್ಯ ವಿರುದ್ಧ ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕ ವಿಭಾಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಸಿದ್ದರಾಮಯ್ಯನವರ ಲಿಂಗಾಯತ ಸಿಎಂ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ, ಬಿಜೆಪಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಲಿಂಗಾಯತ ಯುವ ವೇದಿಕೆ ಮುಖಂಡ ಬಸವರಾಜ್ ಎನ್ನುವವರು ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿ ಸಿದ್ದರಾಮಯ್ಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿಕೆ ನೀಡಿದ್ದು ಸರಿಯಲ್ಲ. ಯಾವುದೇ ಪಕ್ಷದ ಪರವಾಗಿ ದೂರು ಸಲ್ಲಿಸಲು ಬಂದಿಲ್ಲ, ನಮ್ಮ ಸಮುದಾಯಕ್ಕೆ ಅವಮಾನವಾಗುವಂತೆ ಮಾತನಾಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದೇವೆ ಎಂದು ಬಸವರಾಜ್ ಹೇಳಿದ್ದಾರೆ.
ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುವ ಮೂಲಕ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಕ್ಕೆ ತರುವಂತ ಕೆಲಸ ಮಾಡಿದ್ದಾರೆ. ಅವರು ಈ ಮೊದಲು ವಿರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಪ್ರಯತ್ನಿಸಿದ್ದರು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಧರ್ಮವನ್ನಾಗಿ ಮಾಡಲು ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದನ್ನು ನಾವು ಮರೆತಿಲ್ಲ. ಲಿಂಗಾಯತ ಸಿಎಂ ಬಗ್ಗೆ ಹೇಳುವ ಮೂಲಕ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿದ್ದೀರಿ, ವೀರಶೈವ ಸಮುದಾಯಕ್ಕೆ ಇದು ದೊಡ್ಡ ಮೋಸ. ವರುಣಾ ಕ್ಷೇತ್ರದಲ್ಲಿ 70 ಸಾವಿರಕ್ಕಿಂತ ಹೆಚ್ಚಿನ ಮತದಾರರಿದ್ದಾರೆ, ಅವರ ಹೇಳಿಕೆಯಿಂದ ಸಮುದಾಯದ ಜನತೆಗೆ ನೋವಾಗಿದೆ. ಸಿದ್ದರಾಮಯ್ಯ ತಕ್ಷಣವೇ ಕ್ಷಮೆ ಕೇಳದಿದ್ದರೆ ಭಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.