ಸಿದ್ದರಾಮಯ್ಯ ಹೇಳಿಕೆಗೆ ಲಿಂಗಾಯತ ಮಠಾಧೀಶರ ತೀವ್ರ ಆಕ್ಷೇಪ
ಬೆಂಗಳೂರು : ಒಂದೆಡೆ ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಓಲೈಸಲು ಯತ್ನಸುತ್ತಿದ್ದರೆ ಇನ್ನೊಂದೆಡೆ ಪಕ್ಷದ ನಾಯಕ ಸಿದ್ದರಾಮಯ್ಯ ಲಿಂಗಾಯತ ನಾಯಕರೆಲ್ಲ ಭ್ರಷ್ಟರು ಎಂಬ ದಾಟಿಯಲ್ಲಿ ಮಾತನಾಡಿ ಈ ಪ್ರಯತ್ನಕ್ಕೆ ತಣ್ಣೀರು ಎರಚಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಇದೀಗ ಲಿಂಗಾಯತ ಮಠಾಧೀಶರು ಪ್ರವೇಶಿಸಿದ್ದಾರೆ.
ಮಾದ್ಯಮ ಸಂದರ್ಶನವೊಂದರಲ್ಲಿ ಸಿದ್ದರಾಮಯ್ಯ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸುವಾಗ ಲಿಂಗಾಯತರೇ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು ಎಂದು ಹೇಳಿದ್ದಾರೆ. ಈ ಹೇಳಿಕೆ ಲಿಂಗಾಯತ ಸಮುದಾಯವನ್ನು ಕೆರಳಿಸಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯಶ್ರೀ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಇಡೀ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಎಂದು ಹೇಳಿದ್ದಾರೆ.
ಯಾವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೇ ಮಾತಾಡಿದ್ದಾರೋ ಗೊತ್ತಿಲ್ಲ. ಲಿಂಗಾಯತರು ಎಲ್ಲರೂ ಕೆಟ್ಟವರು ಆಗಿರಲ್ಲ. ಯಾರೋ ಒಬ್ಬರು ಭ್ರಷ್ಟಾಚಾರ ಮಾಡಿದ ಕಾರಣ ಇಡೀ ಲಿಂಗಾಯತರನ್ನು ಟೀಕೆ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗತವಾಗಿ ಟೀಕೆ ಮಾಡಲಿ. ಆದರೆ ಸಮುದಾಯಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ವಾಪಸ್ ಪಡೆಯಬೇಕು. ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಎಲ್ಲ ಸಮುದಾಯದವರು ಸಿಎಂ ಆಗಿದ್ದಾರೆ. ಸಿಎಂ ಆಗಿದ್ದಾಗ ತಪ್ಪು-ಒಪ್ಪು ಮಾಡಿದ್ದಾರೆ. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್ ದೇಶ ಮೆಚ್ಚುವ ಆಡಳಿತ ಮಾಡಿದ್ದಾರೆ. ಯಾರೋ ಓರ್ವ ಲಿಂಗಾಯತ ಸಿಎಂ ತಪ್ಪು ಮಾಡಿದರೆಂಬ ಕಾರಣಕ್ಕೆ ಇಡೀ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ತಿರುಗೇಟು
ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಸಿದ್ದರಾಮಯ್ಯನವರೇ ಕರ್ನಾಟಕ ಕಂಡ ಭ್ರಷ್ಟ ಸರ್ಕಾರ ನಿಮ್ಮದು. ಲೋಕಾಯುಕ್ತವನ್ನು ರದ್ದು ಮಾಡಿ ಎಸಿಬಿ ರಚನೆ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದ್ದೀರಿ” ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು. 2013-18 ರವರೆಗೆ ಭ್ರಷ್ಟ ಸರ್ಕಾರ ನಡೆಸಿದವರು ನೀವು. ಬಿಡಿಎಯಲ್ಲಿ ರೀಡೂ ಭ್ರಷ್ಟಾಚಾರ, ಸಣ್ಣ ಹಾಗೂ ಬೃಹತ್ ನಿರಾವರಿ, ಎಸ್ಸಿ ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ ದಿಂಬನ್ನೂ ಬಿಡಲಿಲ್ಲ. ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರೀಯ ಮಾಡಿದ ಖ್ಯಾತಿ ನಿಮ್ಮದು. ಎಸಿಬಿ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದಿರಿ, ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಗಳನ್ನು ರಕ್ಷಣೆ ಮಾಡಿದ್ದೀರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕ ಅಧಿಕಾರ ಇಲ್ಲ. ನಿಮ್ಮಿಂದ ಸರ್ಟಿಫಿಕೆಟ್ ಪಡೆಯುವ ಅವಶ್ಯಕತೆಯಿಲ್ಲ” ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.